ಅಕ್ರಮ ಸಂಬಂಧವನ್ನು ಪ್ರಶ್ನಿಸಿದ ವೃದ್ಧೆಯನ್ನು ಕೊಡಲಿಯಿಂದ ಕೊಚ್ಚಿಕೊಂದ ಯುವಕ!
ಮಂಡ್ಯ: ಸೊಸೆಯ ಅಕ್ರಮ ಸಂಬಂಧದ ಬಗ್ಗೆ ಯುವಕನ ಜೊತೆಗೆ ಜಗಳವಾಡಿದ ವೃದ್ಧೆಯೊಬ್ಬರನ್ನು ಅದೇ ಯುವಕ ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ನಡೆದಿದೆ.
55 ವರ್ಷ ವಯಸ್ಸಿನ ದೊಡ್ಡತಾಯಮ್ಮ ಹತ್ಯೆಯಾದ ವೃದ್ಧೆಯಾಗಿದ್ದು, ದೊಡ್ಡತಾಯಮ್ಮ ಅವರ ಸೊಸೆ ಹಾಗೂ ವಾಸು ಎಂಬ ಅದೇ ಗ್ರಾಮದ ಯುವಕನಿಗೆ ದೈಹಿಕ ಸಂಬಂಧ ಇತ್ತು ಎಂದು ಆರೋಪಿಸಿ ದೊಡ್ಡತಾಯಮ್ಮ, ವಾಸು ಜೊತೆಗೆ ಜಗಳವಾಡಿದ್ದಾರೆ. ಜಗಳದ ಬಳಿಕ ತನ್ನ ಮನೆಗೆ ವಾಪಸ್ ಆಗಿದ್ದರು. ಇತ್ತ ತನ್ನ ಮೇಲೆ ಅಕ್ರಮ ಸಂಬಂಧದ ಆರೋಪ ಮಾಡಿದ ಆಕ್ರೋಶದಿಂದ ವಾಸು ದೊಡ್ಡತಾಯಮ್ಮನ ಮನೆಗೆ ಬಂದಿದ್ದು, ಮನೆಯ ಅಂಗಳಕ್ಕೆ ಆಗಷ್ಟೇ ಮುಟ್ಟಿದ್ದ ದೊಡ್ಡತಾಯವ್ವ ಅವರ ತಲೆಗೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಇತ್ತ ತಾಯಮ್ಮನ ಮನೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ನೆಲದಲ್ಲಿ ಬಿದ್ದು ತಾಯವ್ವ ಹೊರಳಾಡುತ್ತಿದ್ದರು. ಈ ವೇಳೆ ತಾಯವ್ವ ಅವರ ಗಂಡ ಬಂದಿದ್ದು, ಅವರು ಬಂದು ನೀರು ಕುಡಿಸಿದ್ದು, ಆಗಲೇ ತಾಯವ್ವ ಪ್ರಾಣ ಬಿಟ್ಟಿದ್ದಾರೆ.
ಸೊಸೆಯ ಅಕ್ರಮ ಸಂಬಂಧಕ್ಕೆ ಸಂಬಂಧಿಸಿದಂತೆ ನಾಲ್ಕು ತಿಂಗಳ ಹಿಂದೆಯೇ ದೊಡ್ಡತಾಯವ್ವ, ಸೊಸೆ ಹಾಗೂ ಮಗನ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಈ ಗಲಾಟೆಯ ಬಳಿಕ ಸೊಸೆ ತವರು ಮನೆಗೆ ಹೋಗಿದ್ದಳು. ಇದರಿಂದಾಗಿ ಆಕ್ರೋಶಗೊಂಡ ದೊಡ್ಡತಾಯವ್ವ, ನನ್ನ ಮಗನ ಜೀವನ ಹಾಳಾಗಲು ನೀನೇ ಕಾರಣ ಎಂದು ವಾಸು ಬಳಿಯಲ್ಲಿ ಜಗಳವಾಡಿದ್ದರು ಎಂದು ಹೇಳಲಾಗಿದೆ. ಇದರಿಂದ ಆಕ್ರೋಶಗೊಂಡ ವಾಸು ಈ ಕೃತ್ಯ ಎಸಗಿದ್ದಾನೆ.























