ಪ್ರತ್ಯೇಕ ಪ್ರಕರಣ: ಆಯ ತಪ್ಪಿ ಬಾವಿಗೆ ಬಿದ್ದು ಇಬ್ಬರು ಸಾವು

ತೆಂಗಿನ ಕಾಯಿ ಹೆಕ್ಕಲು ಹೋದ ವ್ಯಕ್ತಿಯೊಬ್ಬರು ಪಾಳು ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದಲ್ಲಿ ಸೆ.4ರಂದು ನಡೆದಿದೆ.
ಮೃತರನ್ನು ಯಡ್ತರೆ ಸಮುದಾಯ ಆಸ್ಪತ್ರೆ ಬಳಿಯ ನಿವಾಸಿ ಅಚ್ಚುತ ಎಂ(59) ಎಂದು ಗುರುತಿಸಲಾಗಿದೆ. ಇವರು ಬೈಂದೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಟೆಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಿಗೆ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ. ನಿನ್ನೆ ಮನೆಯ ಪಕ್ಕದ ಗುಡೆಮನೆ ನಾಗಪ್ಪ ಶೇರುಗಾರರ ಅವರ ತೋಟದಲ್ಲಿ ಬಿದ್ದಿದ ತೆಂಗಿನಕಾಯಿಯನ್ನು ಹೆಕ್ಕಲು ಹೋಗಿದ್ದರು. ಈ ವೇಳೆ ಪಾಳುಬಿದ್ದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಕಿಂಗ್ ಮಾಡುತ್ತಿದ್ದ ವೇಳೆ ಬಾವಿಗೆ ಬಿದ್ದು ವ್ಯಕ್ತಿ ಸಾವು:
ಮನೆಯಂಗಳದಲ್ಲಿ ವಾಕಿಂಗ್ ಮಾಡುತ್ತಿದ್ದ ವೇಳೆ ಆಯತಪ್ಪಿ ಬಾವಿಯೊಳಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸುಭಾಸ್ ನಗರದ ಕುರ್ಕಾಲು ತೋಟ ಎಂಬಲ್ಲಿ ಸೆ.3ರಂದು ಸಂಜೆ ನಡೆದಿದೆ.
ಮೃತರನ್ನು ಉಡುಪಿಯ ಸಾಯಿ ರಾಧಾ ಅಪಾರ್ಟ್‌ಮೆಂಟ್ ನಿವಾಸಿ 72 ವರ್ಷದ ವಿಠಲ ಅಮಿನ್ ಎಂದು ಗುರುತಿಸಲಾಗಿದೆ. ಇವರು ಪತ್ನಿ ಶಶಿ ಅವರೊಂದಿಗೆ ಸಾಯಿರಾಧ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದು, 6 ತಿಂಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿ ಬಲ ಕೈ ಹಾಗೂ ಬಲ ಕಾಲಿನ ಸ್ವಾಧೀನ ಕಳೆದುಕೊಂಡಿದ್ದರು.
ಕುರ್ಕಾಲು ತೋಟದಲ್ಲಿರುವ ಅಣ್ಣನ ಮನೆಗೆ ವಾರಕ್ಕೊಮ್ಮೆ ಹೋಗಿ ಬರುತ್ತಿದ್ದರು. ನಿನ್ನೆ ಸಂಜೆ ಕೂಡ ಪತ್ನಿಯೊಂದಿಗೆ ಮನೆಗೆ ಬಂದಿದ್ದು, ಮನೆಯ ಅಂಗಳದಲ್ಲಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಆಯತಪ್ಪಿ ಅಂಗಳದಲ್ಲಿರುವ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೃತರ ಅಣ್ಣನ ಮಗ ಸಚಿನ್ ಕುಮಾರ್ ನೀಡಿರುವ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka