5:34 AM Thursday 16 - October 2025

ಬಾಲಕನ ಸಹಿತ ಕಾರನ್ನು ಎಳೆದುಕೊಂಡು ಹೋದ ಸಂಚಾರಿ ಪೊಲೀಸರು | ಮಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರ ಕೃತ್ಯಕ್ಕೆ ಸಾರ್ವಜನಿಕರು ಸುಸ್ತು

25/12/2020

ಮಂಗಳೂರು: ಮಂಗಳೂರು ಸಂಚಾರಿ ಪೊಲೀಸರು ಇತ್ತೀಚೆಗೆ ಸಾರ್ವಜನಿಕರ ವಾಹನಗಳನ್ನು ಅನಾವಶ್ಯಕವಾಗಿ ಎಳೆದುಕೊಂಡು ಹೋಗಿ ದಂಡ ವಿಧಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ ಇದೀಗ ದೊಡ್ಡದೊಂದು ಪ್ರಮಾದವನ್ನು ಎಸಗಿದ್ದಾರೆ.

 9 ವರ್ಷದ ಬಾಲಕ ಕಾರಿನೊಳಗಿದ್ದರೂ ಪೊಲೀಸರು ಬಾಲಕನ ಸಹಿತ ಕಾರನ್ನು ಠಾಣೆಗೆ ಎಳೆದೊಯ್ದ ಅಮಾನವೀಯ ಘಟನೆ ನಡೆದಿದೆ. ಮಿಜಾರಿನ ದಿವ್ಯಾ ಅವರು ಚಾಲಕ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಮಲ್ಲಿಕಟ್ಟೆಗೆ ಬಂದಿದ್ದರು. ಕಾರನ್ನು ವಸತಿ ಸಮುಚ್ಚಯವೊಂದರ ಬಳಿ ನಿಲ್ಲಿಸಿ ತಮ್ಮ ಒಬ್ಬ ಮಗನನ್ನು ಕರೆದುಕೊಂಡು ಅಂಗಡಿಗೆ ತೆರಳಿದ್ದರು. ಈ ವೇಳೆ ಕಾರಿನಲ್ಲಿ ಚಾಲಕ ಮತ್ತು 9 ವರ್ಷದ ಅವರ ಪುತ್ರ ಇದ್ದ. ದಿವ್ಯಾ ಅವರು ಮೊಬೈಲ್ ಕಾರಿನಲ್ಲಿಯೇ ಬಿಟ್ಟು ಹೋಗಿದ್ದರಿಂದ  ಚಾಲಕ ಮೊಬೈಲ್ ನೀಡಿ ಬರಲು ಹೋಗಿದ್ದ. ಈ ವೇಳೆ ಪೊಲೀಸರು ಕೆಲವೇ ಕ್ಷಣಗಳಲ್ಲಿ ಕಾರನ್ನು ಬಾಲಕನ ಸಹಿತ ಎಳೆದುಕೊಂಡು ಹೋಗಿದ್ದಾರೆ.

ವಾಪಸ್ ಸ್ಥಳಕ್ಕೆ ಬಂದಾಗ ಕಾರು ಮತ್ತು ಬಾಲಕ ಇಬ್ಬರೂ ಕಾಣದೇ ಇರುವುದನ್ನು ಕಂಡು ಎಲ್ಲ ಕಡೆ  ಆತಂಕದಲ್ಲಿ ಹುಡುಕಾಡಿದ್ದು, ಬಳಿಕ ಸ್ಥಳೀಯರ ಸಹಕಾರದೊಂದಿಗೆ  ಸಿಸಿ ಕ್ಯಾಮರ ಪರಿಶೀಲಿಸಿದಾಗ ಪೊಲೀಸರು ಕಾರನ್ನು ಎಳೆದೊಯ್ದಿರುವುದು ತಿಳಿದು ಬಂದಿದೆ. ಪೊಲೀಸರ ಈ ಅಮಾನವೀಯ ಕೃತ್ಯಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 ಕಾರು ನೋಪಾರ್ಕಿಂಗ್ ಸ್ಥಳದಲ್ಲಿ ಕೂಡ ಇರಲಿಲ್ಲ. ಅವರು ರಸ್ತೆಯಲ್ಲಿ ಕೂಡ ನಿಲ್ಲಿಸಿರಲಿಲ್ಲ ಪೊಲೀಸರು ಬೇಕಾ ಬಿಟ್ಟಿಯಾಗಿ ಕಾರನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ಪತ್ರಿಕೆಯೊಂದಕ್ಕೆ ಸಂತ್ರಸ್ತರು ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರ ವರ್ತನೆಗೆ ತೀವ್ರ ಜನಾಕ್ರೋಶ ವ್ಯಕ್ತವಾಗುತ್ತಿದೆ. ಆ ಬಾಲಕನಿಗೆ ಏನಾದರೂ ಅಪಾಯವಾಗಿದ್ದರೆ ಯಾರು ಹೊಣೆ? ಎಂದು ಜನ ಪ್ರಶ್ನಿಸುತ್ತಿದ್ದಾರೆ. ಪೊಲೀಸರು ಯಾವಾಗಲೂ ಸಂಯಮದಿಂದ ಇರಬೇಕು. ಸಾರ್ವಜನಿಕರ ರಕ್ಷಣೆಗಾಗಿ ಪೊಲೀಸರು ಇರುವುದೇ ಹೊರತು, ಸಾರ್ವಜನಿಕರನ್ನು ಶಿಕ್ಷಿಸಲು ಇರುವುದಲ್ಲ ಎನ್ನುವುದನ್ನು ಪೊಲೀಸರು ಮೊದಲು ತಿಳಿಯ ಬೇಕು ಎನ್ನುವ ಮಾತುಗಳು ಸದ್ಯ ಕೇಳಿ ಬಂದಿದೆ.

ಸಾಂದರ್ಭಿಕ ಚಿತ್ರ

ಇತ್ತೀಚಿನ ಸುದ್ದಿ

Exit mobile version