11:53 PM Thursday 6 - November 2025

ಬಂಟ್ವಾಳ | ಸರ್ಕಾರಿ ಶಾಲೆಗೆ ಕಂಪ್ಯೂಟರ್ ಕೊಡುಗೆ ನೀಡಿದ ವಿದ್ಯಾರ್ಥಿ ಸಂಘಟನೆ ಎಸ್‌ ಐಓ

sio
06/11/2025

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಪಾಡಿ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳಿಗೆ ದಾನಿಗಳ ನೆರವಿನಿಂದ ಎರಡು ಕಂಪ್ಯೂಟರ್  ಕೊಡುವ ಮೂಲಕ ವಿದ್ಯಾರ್ಥಿ ಸಂಘಟನೆಯಾದ ಎಸ್‌ ಐಓನ ಪದಾಧಿಕಾರಿಗಳು ಮಾದರಿಯಾಗಿದ್ದಾರೆ.

ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಎಸ್‌ ಐಓ ಕರ್ನಾಟಕ ಘಟಕದ ವತಿಯಿಂದ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಪ್ರವಾದಿ ಮುಹಮ್ಮದ್(ಸ) ಮಾದರಿ ಶಿಕ್ಷಕ ಎಂಬ ಅಭಿಯಾನವನ್ನು ಹಮ್ಮಿಕೊಂಡಿತ್ತು. ಈ ಅಭಿಯಾನದ ಭಾಗವಾಗಿ ಎಲ್ಲ ಶಾಲೆಗಳಿಗೆ ಎಸ್‌ ಐಓ ಪದಾಧಿಕಾರಿಗಳು ತೆರಳಿ, ಗಿಫ್ಟ್ ಕೊಟ್ಟು ಶಿಕ್ಷಕರನ್ನು ಗೌರವಿಸುವ ಕಾರ್ಯವನ್ನು ಹಮ್ಮಿಕೊಂಡಿತ್ತು. ಅಭಿಯಾನದ ಭಾಗವಾಗಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಗೌರವಿಸಲಾಗಿತ್ತು .ಈ ಸಂದರ್ಭದಲ್ಲಿ  ಬಂಟ್ವಾಳ ತಾಲೂಕಿನ ಸರಪಾಡಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಆದಮ್ ರವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಸಿಕ್ಕಿತ್ತು. ಎಸ್ ಐಓ ಪಾಣೆಮಂಗಳೂರು ಘಟಕದ ವತಿಯಿಂದ ಅವರನ್ನು ಭೇಟಿಯಾಗಿ ಶುಭ ಹಾರೈಸಿದ ಸಂದರ್ಭದಲ್ಲಿ ಎಸ್ಐಓ ಪದಾಧಿ ಕಾರಿಗಳೊಂದಿಗೆ ಸಮಾಲೋಚನೆ ನಡೆಸಿ AI (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಕಾಲದಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಪ್ಯೂಟರ್ ಜ್ಞಾನ ತುಂಬಾ ಅಗತ್ಯವಿದ್ದು, ನಮ್ಮ ಶಾಲೆಯ ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನ ಪಡೆಯುವಂತಾಗಲೂ ಸಂಘಟನೆ ವತಿಯಿಂದ ಶಾಲೆಗೆ ಕಂಪ್ಯೂಟರ್ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಇದನ್ನು ಮನಗಂಡ ಎಸ್‌ ಐಓ ಪಾಣೆಮಂಗಳೂರು ಘಟಕದ ಪದಾಧಿಕಾರಿಗಳು ದಾನಿಗಳನ್ನು ಭೇಟಿಯಾಗಿ ಶಾಲೆಗೆ ಎರಡು ಕಂಪ್ಯೂಟರ್ ಕೊಡುಗೆ ನೀಡಿ ಮಾದರಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಶಿಕ್ಷಕರಾದ ಆದಮ್,  ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿನೋಲ ಸಿವಿಲ್ಯ ಪಿಂಟೋ ಎಸ್‌ ಐಓ ಸಂಘಟನೆಯ ಕಾರ್ಯವನ್ನು ಶ್ಲಾಘಿಸಿದರು.  ಎಸ್ ಐ ಓ ಪಾಣೆಮಂಗಳೂರು ಘಟಕದ ಅಧ್ಯಕ್ಷರಾದ ಚೆಂಡಾರಿ ಮುಬಾರಿಶ್, ಎಸ್‌ ಡಿಎಂಸಿ ಅಧ್ಯಕ್ಷರಾದ ಪುರುಷೋತ್ತಮ ಬಿ. ಮಾತನಾಡಿದರು.  ಶಿಕ್ಷಕಿ  ಕಿಶೋರಿ ಧನ್ಯವಾದ ಅರ್ಪಿಸಿದರು.  ಈ ಸಂದರ್ಭದಲ್ಲಿ ಎಸ್ ಐಓ ಸಂಘಟನೆಯ ಜಿಲ್ಲಾಧ್ಯಕ್ಷ ರಿಝ್ವಾನ್ , ಎಸ್ ಐಓ ಪಾಣೆಮಂಗಳೂರು ಘಟಕದ ಸದಸ್ಯರಾದ ಇಸ್ಮಾಯಿಲ್, ಮುತಹರ್, ಅಫ್ಸಾನ್ ಬೋಳಂಗಡಿ ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version