ಬಜ್ಪೆ: ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಬಜ್ಪೆ: 79ನೇ ಸ್ವಾತಂತ್ರ್ಯೋತ್ಸವವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಸಿದ್ದಾರ್ಥ ನಗರ, ಬಜ್ಪೆ ಇಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಂ.ಕೆ.ಅಶ್ರಫ್ ಧ್ವಜಾರೋಹಣಗೈದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸ್ಥಳೀಯ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯೆಯಾದ ಪ್ರೆಸಿಲ್ಲಾ ಡಿ’ಸೋಜ, 1947 ಆಗಸ್ಟ್ 15 ರಂದು ನಮಗೆ ಸ್ವತಂತ್ರ ಸಿಕ್ಕರೂ ಸಹ ಪ್ರಸ್ತುತ ದಿನಮಾನಗಳಲ್ಲಿ ಅದು ಸ್ವತಂತ್ರವೆಂದೆನಿಸುತ್ತಿಲ್ಲ. ಏಕೆಂದರೆ ಭಾರತಕ್ಕೆ ಸ್ವಾತಂತ್ರ ಸಿಕ್ಕಿದೆಯೇ ವಿನಃ ಜನಸಾಮಾನ್ಯರಿಗೆ ಇನ್ನೂ ಸಹ ಸ್ವಾತಂತ್ರ್ಯ ಸಿಕ್ಕಿಲ್ಲ. ನಮ್ಮ ದೇಶದಲ್ಲಿ ಕಾನೂನು ವ್ಯವಸ್ಥೆ ಅಷ್ಟು ಬಿಗುವಿನಲ್ಲಿ ಇದ್ದರೂ ಸಹ ,ಸಾಮಾನ್ಯ ಜನರು ನ್ಯಾಯಕ್ಕಾಗಿ ಪರದಾಡುವ ಪರಿಸ್ಥಿತಿ ಬಂದೊದಗಿದೆ, ಈಗಲೂ ಸಹ ಹೆದರಿಕೆಯಿಂದ ಜೀವಿಸುವ ಪರಿಸ್ಥಿತಿ ಎದುರಾಗಿದೆ, ಇದು ನಿಜವಾದ ಸ್ವತಂತ್ರವಲ್ಲ. ಯಾವಾಗ ಒಬ್ಬ ವ್ಯಕ್ತಿ ನಿರ್ಭಯವಾಗಿ, ಸ್ವತಂತ್ರವಾಗಿ, ಸಾಮಾಜಿಕ, ಆರ್ಥಿಕ ಸಮಾನತೆಯಿಂದ ಬಾಳುತ್ತಾನೋ ಆಗ ನಮಗೆ ನಿಜವಾದ ಸ್ವತಂತ್ರ ಸಿಕ್ಕಿದ ಹಾಗೆ. ಆದ್ದರಿಂದ ನಾವೆಲ್ಲರೂ ಜಾತಿ, ಧರ್ಮ, ಭಾಷೆ, ಮತ–ಪಂಥಗಳನ್ನು ಬಿಟ್ಟು, ಒಂದಾಗಿ ಬಾಳೋಣ ಸಮಾನತೆಯಿಂದ ಬಾಳೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ–ರಾಷ್ಟ್ರೀಯ ನಾಯಕರ ಪೋಷಾಕುಗಳನ್ನು ಧರಿಸಿ ಭಾಗವಹಿಸಿದ್ದು ವಿಶೇಷವಾಗಿತ್ತು. ಹಲವಾರು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಸ್ವಾತಂತ್ರೋತ್ಸವಕ್ಕೆ ಸಂಬಂಧಿಸಿದವಾಗಿ ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಭಾಷಣಗಳನ್ನು ಮಾಡಿದರು.
ಸಭೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಲತಾಕ್ಷಿ ಸದಸ್ಯರಾದ ಶರೀಫ್, ಉಮಾನಾಥ, ಮುಖ್ಯೋಪಾಧ್ಯಾಯನಿ ಅನಂತಲಕ್ಷ್ಮಿ, ಡಿಎಸ್ ಎಸ್ ಮುಖಂಡರಾದ ಎಂ. ದೇವದಾಸ್, ಸ್ಥಳೀಯರಾದ ಕೃಷ್ಣಾನಂದ ಡಿ., ಸತೀಶ್ ಸಾಲ್ಯಾನ್, ವೆಂಕಪ್ಪ, ಚಂದ್ರಶೇಖರ, ಭಾಸ್ಕರ್, ಮಂಜಪ್ಪ ಪುತ್ರನ್, ಅಂಗನವಾಡಿ ಶಿಕ್ಷಕಿ ಮೋಹಿನಿ, ಹಳೆ ವಿದ್ಯಾರ್ಥಿ ಸಂಘದ ಸ್ವಾತಿ, ಶಿಕ್ಷಕ ವೃಂದದವರು ಮತ್ತು ಊರಿನ ನಾಗರಿಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಗಣೇಶ್ ಅವರು ನಿರೂಪಿಸಿದರು, ಪ್ರಜ್ಞಾ ಅವರು ವಂದನಾರ್ಪಣೆಗೈದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD