ಗಣೇಶನಿಗೆ ಪೂಜೆ ಸಲ್ಲಿಸುತ್ತಿದ್ದ ವೇಳೆ ದಿಢೀರ್ ಬೆಂಕಿ: ಸ್ಪಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಬಿಜೆಪಿ ರಾಷ್ಟ್ರಧ್ಯಕ್ಷ ಜೆ.ಪಿ.ನಡ್ಡಾ

ಬಿಜೆಪಿ ರಾಷ್ಟ್ರ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬವಾನ್ಕುಲೆ ಅವರು ಪುಣೆಯಲ್ಲಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಗಣೇಶನ ಮೂರ್ತಿ ಇಟ್ಟಿದ್ದ ಪೆಂಡಾಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಗರದ ಕೇಂದ್ರ ಪ್ರದೇಶವಾದ ಲೋಕಮಾನ್ಯ ನಗರದಲ್ಲಿ ಬೆಂಕಿ ವ್ಯಾಪಿಸಿತು. ಕೂಡಲೇ ನಡ್ಡಾ ಅವರನ್ನು ಅವರ ಭದ್ರತಾ ಸಿಬ್ಬಂದಿ ತ್ವರಿತವಾಗಿ ಪೆಂಡಾಲ್ ನಿಂದ ಹೊರಗೆ ಕರೆದೊಯ್ದಿದ್ದಾರೆ. ಅಂದಹಾಗೇ ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.
ನಡ್ಡಾ ಅವರು ಗಣೇಶ ಪೆಂಡಾಲ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ತಕ್ಷಣ ಸ್ಥಳೀಯರ ಬೆಂಬಲದೊಂದಿಗೆ ಕಾರ್ಯಾಚರಣೆ ನಡೆಸಿದರು. ಸ್ಥಳದಲ್ಲಿ ಅಗ್ನಿಶಾಮಕ ದಳದ ಘಟಕಗಳನ್ನು ನಿಯೋಜಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ವಲಯ 3) ಸುಹೇಲ್ ಶರ್ಮಾ ಹೇಳಿದ್ದಾರೆ. ಸಾನೆ ಗುರೂಜಿ ಗಣೇಶ್ ಮಿತ್ರ ಮಂಡಲ್ ಸ್ಥಾಪಿಸಿದ ಪೆಂಡಾಲ್ ನಲ್ಲಿ ಪಟಾಕಿ ಸಿಡಿದಿದ್ದರಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪುಣೆ ನಗರ ಬಿಜೆಪಿ ಅಧ್ಯಕ್ಷ ಧೀರಜ್ ಘಾಟೆ ಮತ್ತು ಭದ್ರತಾ ಸಿಬ್ಬಂದಿ ಉಜ್ಜೈನಿಯ ಪ್ರಸಿದ್ಧ ಮಹಾಕಾಲೇಶ್ವರ ದೇವಾಲಯದ ಪ್ರತಿರೂಪವಾದ ಪೆಂಡಾಲ್ ನಿಂದ ನಡ್ಡಾ ಅವರನ್ನು ಹೊರಗೆ ಕರೆದೊಯ್ಯುತ್ತಿರುವುದು ಕಂಡುಬಂದಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಈ ಪ್ರದೇಶದಲ್ಲಿ ಮಳೆ ಪ್ರಾರಂಭವಾಯಿತು. ಇದು ಬೆಂಕಿಯನ್ನು ನಂದಿಸಲು ಸಹಾಯ ಮಾಡಿತು.
ನಗರದ ಕೊಥ್ರುಡ್ ಪ್ರದೇಶದಲ್ಲಿರುವ ಮತ್ತೊಂದು ಗಣೇಶ ಪೆಂಡಾಲ್ ನಲ್ಲಿ ‘ಆರತಿ’ಯಲ್ಲಿ ಭಾಗವಹಿಸಲು ಬಿಜೆಪಿ ಅಧ್ಯಕ್ಷರು ಸ್ಥಳದಿಂದ ಹೊರಟರು ಎಂದು ಡಿಸಿಪಿ ಶರ್ಮಾ ತಿಳಿಸಿದ್ದಾರೆ. ಬೆಂಕಿಯನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದೆ ಮತ್ತು ಯಾವುದೇ ವ್ಯಕ್ತಿಗೆ ಗಾಯಗಳಾಗಿಲ್ಲ ಎಂದು ಅವರು ಹೇಳಿದ್ದಾರೆ. ಅತಿಥಿಗಳನ್ನು ಸ್ವಾಗತಿಸಲು ಗಣೇಶ ಮಂಡಳಿಯ ಸದಸ್ಯರು ಪ್ರಾರಂಭಿಸಿದ ಪಟಾಕಿಗಳು ಬೆಂಕಿ ಬೀಳಲು ಕಾರಣವಾಯಿತು.