10:19 PM Thursday 21 - August 2025

ಬಿಜೆಪಿಗೆ ವಿನಾಶ ಕಾಲ ವಿಪರೀತ ಬುದ್ದಿ ಅನ್ನುವ ಪರಿಸ್ಥಿತಿ ಬಂದಿದೆ: ಯು.ಟಿ.ಖಾದರ್

u k kadar
19/08/2022

ಮಂಗಳೂರು: ಇದು ಕೇವಲ ದೈಹಿಕ ದಾಳಿ ಅಲ್ಲ ತತ್ವ ಸಿದ್ದಾಂತದ ಮೇಲೆ ನಡೆದ ದಾಳಿ, ಈ ರೀತಿಯ ದಾಳಿಗೆ ಕಾಂಗ್ರೆಸ್ ಭಯ ಪಡುವುದಿಲ್ಲ. ಈ ಮೂಲಕ ಬಿಜೆಪಿಯವರು ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ ಎಂದು ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಅವರು, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಡಗಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಜನರಿಗೆ ತೊಂದರೆ ಆಗಿದೆ ಅಂದಾಗ ಅಲ್ಲಿಗೆ ಭೇಟಿ ನೀಡುವುದು ಜವಾಬ್ದಾರಿ. ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಅಲ್ಲಿಗೆ ಹೋಗಿದ್ದಾರೆ ರಾಜ್ಯ ಸರ್ಕಾರ ಕೋಮುವಾದಿಗಳ ಹಾಗೂ ಗೂಂಡಾಗಳ ಕೈಯಲಿದೆ. ಸಮಾಜದಲ್ಲಿ ಅರಾಜಕತೆ ಸೃಷ್ಟಿಸುವವರ ಮೇಲೆ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದಾಗಲೆಲ್ಲ ಧರ್ಮ ದಂಗಲ್ ಆರಂಭ ಆಗುತ್ತದೆ. ಬಿಜೆಪಿ ಸರ್ಕಾರ ಹೋಗದೆ ರಾಜ್ಯದಲ್ಲಿ ಜನರಿಗೆ ನೆಮ್ಮದಿ ಸಿಗಲಾರದು. ಮುಂದಿನ ಬಾರಿ ಅವರು ಅಧಿಕಾರಕ್ಕೆ ಬರೋದಿಲ್ಲ ಅನ್ನೋದು ಅರಿವಾಗಿದೆ. ಹೀಗಾಗಿ ಪರೋಕ್ಷವಾಗಿ ಇಂತಹ ಕೃತ್ಯಗಳಿಗೆ ಬೆಂಬಲ ನೀಡ್ತಾ ಇದ್ದಾರೆ ಎಂದು ಯು.ಟಿ.ಖಾದರ್ ಟೀಕಿಸಿದರು.

ಸಿದ್ದರಾಮಯ್ಯರ ಮೇಲೆ ನಿನ್ನೆ ಮೊಟ್ಟೆ ಎಸೆದಿರೋದು ಖಂಡನೀಯ. ಇದು ಕೆಲವೊಂದು ಸಮಾಜಘಾತುಕ ಶಕ್ತಿಗಳು ಹಾಗೂ ಬಿಜೆಪಿಯವರ ಕೃತ್ಯವಾಗಿದೆ. ಇದು ಬರೇ ದೈಹಿಕ ದಾಳಿಯ ಪ್ರಯತ್ನವಲ್ಲ. ವೈಚಾರಿಕತೆ ಮತ್ತು ಪ್ರಜಾಪ್ರಭುತ್ವದ ತತ್ವ ಆದರ್ಶದ ಮೇಲೆ ನಡೆದ ದಾಳಿ, ಸಿದ್ದಾಂತದ ವಿರುದ್ದದ ದಬ್ಬಾಳಿಕೆಯ ವಿರುದ್ದ ಕಾಂಗ್ರೆಸ್ ಹೋರಾಡುತ್ತದೆ ಎಂದು ಖಾದರ್ ಹೇಳಿದರು.

ಭಯ ಹುಟ್ಟಿಸಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಧ್ವನಿ ಅಡಗಿಸಲು ಬಿಜೆಪಿಯಿಂದ ಸಾಧ್ಯವಿಲ್ಲ. ಇದು ಪರೋಕ್ಷ ಮತ್ತು ನೇರವಾಗಿ ರಾಜ್ಯ ಬಿಜೆಪಿ ಕುಮ್ಮಕ್ಕಿನಿಂದ, ಪ್ರಾಯೋಜಿತವಾಗಿ ನಡೆದಿದೆ. ಪ್ರತಿಪಕ್ಷ ನಾಯಕ ಸರ್ಕಾರವನ್ನ ಎಚ್ಚರಿಸೋ ಕೆಲಸ ಮಾಡ್ತಾರೆ. ಮಳೆ ಹಾನಿಯಲ್ಲಿ ಜನರ ಸಮಸ್ಯೆ ವೀಕ್ಷಿಸಲು ಅವರು ಹೋಗಿದ್ದಾರೆ. ಆದರೆ ಅವರ ಧ್ಬನಿ ಅಡಗಿಸೋ ಕೆಲಸ ಮಾಡಲಾಗಿದೆ ಎಂದು ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಗೆ ವಿನಾಶ ಕಾಲ ವಿಪರೀತ ಬುದ್ದಿ ಅನ್ನುವ ಪರಿಸ್ಥಿತಿ ಬಂದಿದೆ. ಬಿಜೆಪಿಯ ಈ ಪ್ರಯತ್ನಗಳು ನಮಗೆ ಇನ್ನಷ್ಟು ಗಟ್ಟಿನಿಲುವು ತೆಗೆದುಕೊಳ್ಳಲು ಪ್ರೇರಣೆಯಾಗಿದೆ. ನಾವು ಮತ್ತಷ್ಟು ವೈಚಾರಿಕ ಮತ್ತು ಪ್ರಜಾಪ್ರಭುತ್ವ ಪರವಾಗಿ ಹೋರಾಟ ಮಾಡ್ತೇವೆ. ಕಾಂಗ್ರೆಸ್ ಈಗಲೂ ಆಗಲೂ ಅಸಹಿಷ್ಣುತೆ ವಿರೋಧಿಸುತ್ತೆ. ಕಾಂಗ್ರೆಸ್ ಧ್ವನಿ ಅಡಗಿಸ್ತೇವೆ ಅನ್ನೋದು ಮೂರ್ಖತನ. ರಾಜ್ಯ ಸರ್ಕಾರ ಈ ವಿಚಾರಕ್ಕೆ ನೇರ ಜವಾಬ್ದಾರಿ ಎಂದರು.

ಪೊಲೀಸ್ ಇಲಾಖೆ ಸಂಪೂರ್ಣವಾಗಿ ರಾಜ್ಯ ಸರ್ಕಾರದ ಕೈಗೊಂಬೆಯಾಗಿದೆ. ಗುಂಪು ಸೇರಿದ 25 ಜನರನ್ನ ಪೊಲೀಸರಿಗೆ ಯಾಕೆ ತಡೆಯಲು ಆಗಿಲ್ಲ? ಅವರನ್ನು ತಡೆಯದಂತೆ ಪೊಲೀಸರಿಗೆ ಯಾರ ಒತ್ತಡ ಇತ್ತು? ಸರ್ಕಾರವನ್ನು ಕೋಮುವಾದಿಗಳ ಮತ್ತು ಗೂಂಡಾಗಳ ಕೈಗೆ ಕೊಡಲಾಗಿದೆ. ಸಮಾಜದಲ್ಲಿ ಅರಾಜಕ ಸೃಷ್ಟಿಸುವವರ ಮೇಲೆ ಕ್ರಮ ತೆಗೊಳೋದ್ರಲ್ಲಿ ವಿಫಲವಾಗಿದೆ ಎಂದರು.

ಸಾವರ್ಕರ್ ಪೋಸ್ಟರ್: ಯಾರೂ ಯಾರ ಬ್ಯಾನರ್ ಹಾಕಿದ್ರೂ ಯಾರಿಗೂ ತೆಗೆಯಲು ಅವಕಾಶ ಇಲ್ಲ. ಯಾರೂ ಬೇಕಾದ್ರೂ ಅನುಮತಿ ಪಡೆದು ಪೋಸ್ಟರ್ ಹಾಕಲಿ. ಆದರೆ ಪೋಸ್ಟರ್ ಹಾಕೋರ ಉದ್ದೇಶ ಸದುದ್ದೇಶ ಇರಲಿ, ದುರುದ್ದೇಶ ಬೇಡ. ನನ್ನ ಕ್ಷೇತ್ರದಲ್ಲಿ ಇಂಥ ಬ್ಯಾನರ್ ಹಾಕಿದ್ರೆ ಜನ ನೋಡಿ ನೆಗಾಡಿಕೊಂಡು ಹೋಗ್ತಾರೆ. ಆದ್ರೆ ಯಾರೂ ಅದನ್ನ ತೆಗೆಯಿರಿ ಅಂತ ಯಾರೂ ಹೇಳಿಲ್ಲ. ಅನುಮತಿ ಪಡೆಯದೇ ಹಾಕಿದ್ದಕ್ಕೆ ಪೊಲೀಸರು ತೆಗೆಸಿದ್ದಾರೆ ಎಂದರು.

ಸಾವರ್ಕರ್ ವಿರುದ್ಧ ಕಾಂಗ್ರೆಸ್ ಗೆ ಸೈದಾಂತಿಕ ಭಿನ್ನಾಭಿಪ್ರಾಯ ಇದೆ. ಅವರು ಸ್ವಾತಂತ್ರ್ಯ ಹೋರಾಟ ಮಾಡಿಲ್ಲ ಎಂದು ಕಾಂಗ್ರೆಸ್ ಹೇಳಿಲ್ಲ. ಅಂಡಮಾನ್ ನಲ್ಲಿ ಶಿಕ್ಷೆಗೆ ಒಳಗಾದ ಅನೇಕರು ವಿವಿಧ ಹಿಂಸೆ ಅನುಭವಿಸಿದ್ದಾರೆ. ಅನೇಕ ಹೋರಾಟಗಾರರು ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಸಾವರ್ಕರ್ ಅಲ್ಲಿ ದಯಾ ಬಿಕ್ಷೆ ಕೇಳಿ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಜೈಲಿನಿಂದ ಬಂದ ಬಳಿಕ ಯಾವುದೇ ಹೋರಾಟದಲ್ಲಿ ಭಾಗಿಯಾಗಿಲ್ಲ. ಬದಲಾಗಿ ಪೆನ್ಷನ್ ಗಾಗಿ ಬ್ರಿಟಿಷರ ಬಳಿ ಅಂಗಲಾಚಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ

Exit mobile version