ನಟಿಯ ಮೇಲೆ ಮುಗಿಬಿದ್ದ ಅಭಿಮಾನಿಗಳು: ಹಾಡು ಬಿಡುಗಡೆಗೆ ಬಂದಿದ್ದ ನಟಿ ಸ್ವಲ್ಪದರಲ್ಲೇ ಪಾರು!
ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಟಿ ನಿಧಿ ಅಗರ್ವಾಲ್ ಅವರ ಮೇಲೆ ಅಭಿಮಾನಿಗಳು ಮುಗಿಬಿದ್ದ ಘಟನೆಗೆ ಸಂಬಂಧಿಸಿದಂತೆ ಹೈದರಾಬಾದ್ ನ ಪ್ರಸಿದ್ಧ ಮಾಲ್ ನಡೆದಿದ್ದು, ಸದ್ಯ ಘಟನೆಗೆ ಸಂಬಂಧಿಸಿದಂತೆ ಮಾಲ್ ನ ಆಡಳಿತ ಮಂಡಳಿ ಮತ್ತು ಕಾರ್ಯಕ್ರಮ ಸಂಘಟಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸೂಪರ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ‘ದಿ ರಾಜಾ ಸಾಬ್’ (The Raja Saab) ಚಿತ್ರದ ಹಾಡು ಬಿಡುಗಡೆ ಸಮಾರಂಭವು ಬುಧವಾರ ರಾತ್ರಿ ಹೈದರಾಬಾದ್ ನ ಕೆಪಿಎಚ್‌ಬಿ (KPHB) ಪ್ರದೇಶದ ಮಾಲ್ ವೊಂದರಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ನಟಿ ನಿಧಿ ಅಗರ್ವಾಲ್ ಆಗಮಿಸಿದ್ದರು. ನೆಚ್ಚಿನ ನಟಿಯನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮಾಲ್‌ನಲ್ಲಿ ಜಮಾಯಿಸಿದ್ದರು.
ಕಾರ್ಯಕ್ರಮ ಮುಗಿಸಿ ನಿಧಿ ಅಗರ್ವಾಲ್ ಅವರು ಮಾಲ್‌ನಿಂದ ಹೊರಬರುತ್ತಿದ್ದಾಗ, ಪರಿಸ್ಥಿತಿ ಕೈಮೀರಿತು. ಅಭಿಮಾನಿಗಳು ನಟಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮತ್ತು ಹತ್ತಿರದಿಂದ ನೋಡಲು ಏಕಾಏಕಿ ಮುಗಿಬಿದ್ದರು. ಇದರಿಂದಾಗಿ ನಟಿ ತೀವ್ರ ಇಕ್ಕಟ್ಟಿಗೆ ಸಿಲುಕಿ ಅಸ್ವಸ್ಥರಾದಂತೆ ಕಂಡುಬಂದರು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ, ಭದ್ರತಾ ಸಿಬ್ಬಂದಿ ನಟಿಯನ್ನು ಸುರಕ್ಷಿತವಾಗಿ ಕಾರಿನವರೆಗೆ ತಲುಪಿಸಲು ಹರಸಾಹಸ ಪಡುತ್ತಿರುವುದು ಮತ್ತು ನಟಿ ಭೀತಿಗೊಳಗಾದ ದೃಶ್ಯಗಳು ಸೆರೆಯಾಗಿವೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೆಪಿಎಚ್‌ಬಿ ಪೊಲೀಸರು ಮಾಲ್ ವ್ಯವಸ್ಥಾಪಕರು ಮತ್ತು ಸಂಘಟಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸುವ ಮೊದಲು ಸಂಘಟಕರು ಇಲಾಖೆಯಿಂದ ಯಾವುದೇ ಪೂರ್ವಾನುಮತಿಯನ್ನು ಪಡೆದಿರಲಿಲ್ಲ. ಸಾವಿರಾರು ಜನ ಸೇರುವ ಸಾಧ್ಯತೆ ಇದ್ದರೂ ಸೂಕ್ತ ಭದ್ರತಾ ವ್ಯವಸ್ಥೆ ಮಾಡುವಲ್ಲಿ ಸಂಘಟಕರು ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























