12:29 AM Tuesday 20 - January 2026

ಚಲಿಸುತ್ತಿದ್ದ ಬಸ್ ನಲ್ಲೇ ಉಸಿರುಗಟ್ಟಿ ಅಸ್ವಸ್ಥರಾದ ವಿದ್ಯಾರ್ಥಿನಿಯರು | ಅಷ್ಟಕ್ಕೂ ನಡೆದದ್ದೇನು ಗೊತ್ತಾ?

24/02/2021

ಬೆಳಗಾವಿ: ರಾಜ್ಯ ಸಾರಿಗೆ ಇಲಾಖೆಗೆ ಇದೇ ಮೊದಲ ಬಾರಿಗೆ ಇಂತಹದ್ದೊಂದು ಕಪ್ಪು ಚುಕ್ಕೆ ಬಂದಿದ್ದು, ಬಸ್ಸಿನಲ್ಲಿ ಗಾಳಿ ಹೋಗಲೂ ಕೂಡ ಸ್ಥಳವಿಲ್ಲದಷ್ಟು ಪ್ರಯಾಣಿಕರನ್ನು ತುಂಬಿಸಿದ ಕಾರಣ ವಿದ್ಯಾರ್ಥಿನಿಯರು ಅಸ್ವಸ್ಥರಾದ ಘಟನೆ ಖಾನಾಪುರ ತಾಲೂಕಿನಲ್ಲಿ ನಡೆದಿದೆ. ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತವರೂರಿನ ವಿದ್ಯಾರ್ಥಿಗಳಿಗೇ ಸಮರ್ಪಕವಾದ ಬಸ್ ವ್ಯವಸ್ಥೆಗಳಿಲ್ಲ.

ರಾಜ್ಯ ಸರ್ಕಾರ ಸಮರ್ಪಕವಾಗಿ ಬಸ್ ಕಲ್ಪಿಸದ ಹಿನ್ನೆಲೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಗೋಣಿ ಮೂಟೆಗಳನ್ನು ಲಾರಿಯಲ್ಲಿ ತುಂಬುವ ಹಾಗೆ, ಕೆಎಸ್ಸಾರ್ಟಿಸಿ ಬಸ್ ನಲ್ಲಿ ವಿದ್ಯಾರ್ಥಿಗಳನ್ನು ತುಂಬಿಕೊಂಡು ಹೋಗುವ ಸ್ಥಿತಿ ಇಲ್ಲಿದೆ. ಬಸ್ ಚಾಲಕ ಹಾಗೂ ನಿರ್ವಾಹಕರು ಅನಿವಾರ್ಯವಾಗಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲೇ ಬೇಕಾಗಿದೆ. ಇಲ್ಲವಾದರೆ ಬಸ್ ನಿಲ್ಲಿಸುತ್ತಿಲ್ಲ ಎಂಬ ದೂರು ವಿದ್ಯಾರ್ಥಿಗಳಿಂದ ಬರುತ್ತದೆ. ಇತ್ತ ಕೆಎಸ್ಸಾರ್ಟಿಸಿ ಬಸ್, ಕಡಿಮೆ ಬಸ್ ಬಿಡುತ್ತಿದ್ದು, ಇದರಿಂದಾಗಿ ವಿದ್ಯಾರ್ಥಿಗಳು, ಸಾರ್ವಜನಿಕರು ದಿನ ನೇತಾಡಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬಸ್ ನಲ್ಲಿ ಗಾಳಿ ಹೋಗಲು ಕೂಡ ಸ್ಥಳವಿಲ್ಲದ ಹಿನ್ನೆಲೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಬಸ್ ನಲ್ಲಿಯೇ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಅವರನ್ನು  ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ವಿಚಾರ ತಿಳಿದ ವಿದ್ಯಾರ್ಥಿಗಳು ಹಾಗೂ ಪಾಲಕರು ಸಾರಿಗೆ ಅಧಿಕಾರಿಯನ್ನು ತರಾಟೆಗೆತ್ತಿಕೊಂಡಿದ್ದಾರೆ.

ಬಸ್ ಸರಿಯಾದ ಸಮಯಕ್ಕೆ ಬಿಡದಿರುವುದು ಹಾಗೂ ಕಡಿಮೆ ಸಂಖ್ಯೆಯ ಬಸ್ ಗಳನ್ನು ಬಿಟ್ಟಿರುವುದರಿಂದ ಒಂದೇ ಬಸ್ ನಲ್ಲಿ ಪ್ರಯಾಣಿಕರು ತುಂಬುತ್ತಿದ್ದಾರೆ. ಇದರಿಂದಾಗಿ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version