ಚಿಕ್ಕಮಗಳೂರು: ಭಾರೀ ಮಳೆಗೆ ವಿವಿಧೆಡೆ ಅನಾಹುತ: ಉರುಳಿದ ಮರ, ಕುಸಿದು ಬಿದ್ದ ತಡೆಗೋಡೆ, ಶೆಡ್

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಕಳೆದ ರಾತ್ರಿ ಆರಂಭವಾದ ಭಾರೀ ಗಾಳಿ ಹಾಗೂ ಧಾರಾಕಾರ ಮಳೆಯಿಂದ ಕಾಫಿನಾಡ ಮಲೆನಾಡು ಭಾಗದ ಹಲವಾರು ಗ್ರಾಮಗಳು ಕತ್ತಲಲ್ಲಿ ಮುಳುಗಿವೆ. ತರುವೆ, ಬಿನ್ನಡಿ, ಅತ್ತಿಗೆರೆ, ದೇವನಗೂಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಗಾಳಿಗೆ ಮುರಿದು ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಕಾಫಿ ತೋಟಗಳಲ್ಲಿ ಬೃಹತ್ ಮರಗಳು ಹಾಗೂ ಕಾಫಿ ಗಿಡದ ರೆಂಬೆಗಳು ಮುರಿದು ಬಿದ್ದಿದ್ದು, ಬೆಳೆಗಾರರಲ್ಲಿ ಆತಂಕ ಮನೆಮಾಡಿದೆ. ಮರಗಳು ಬೀಳುವ ಘಟನೆಯಿಂದ ತೋಟಗಳಿಗೆ ಹೆಚ್ಚಿನ ಹಾನಿಯುಂಟಾಗಿದೆ. ವಿದ್ಯುತ್ ಸಂಪರ್ಕ ಪುನಃ ಸ್ಥಾಪಿಸಲು ಮಸ್ಕಾಂ ಸಿಬ್ಬಂದಿಗಳು ಮಳೆಯ ಮಧ್ಯೆ ಹರಸಾಹಸಪಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ.
ಮನೆ ಮೇಲೆ ಬಿದ್ದ ಬೃಹತ್ ಮರ: ಭಾರೀ ಮಳೆ ಅಬ್ಬರದ ಹಿನ್ನೆಲೆ ಮೂಡಿಗೆರೆ ತಾಲೂಕಿನ ತ್ರಿಪುರ ಗ್ರಾಮದಲ್ಲಿ ಸುಶೀಲ ಎಂಬುವರ ಮನೆ ಮೇಲೆ ಬೃಹತ್ ಮರವೊಂದು ಉರುಳಿದೆ. ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರ ಬಿದ್ದ ಪರಿಣಾಮ ಮೋನಪ್ಪ ಎಂಬುವರ ಮಾರುತಿ 800 ಕಾರು ಜಖಂಗೊಂಡಿದೆ.
ಕುಸಿದ ಮನೆ ಪಕ್ಕದ ತಡೆಗೋಡೆ: ಭಾರೀ ಗಾಳಿ–ಮಳೆಗೆ ಮನೆ ಪಕ್ಕದ ತಡೆಗೋಡೆ ಕುಸಿದ ಘಟನೆ ಮೂಡಿಗೆರೆ ತಾಲೂಕಿನ ಜಾರಗಲ್ ಗ್ರಾಮದಲ್ಲಿ ಘಟನೆ ನಡೆದಿದೆ. ಜಾರಗಲ್ ಗ್ರಾಮದ ಜಯಂತಿ ಎಂಬುವರ ಮನೆ ಕುಸಿಯುವ ಭೀತಿಯಲ್ಲಿದ್ದು, ಗಾಳಿ ಮಳೆ ಜೋರಾದ್ರೆ ಧರೆ ಕುಸಿಯುವ ಭೀತಿ ಸೃಷ್ಟಿಯಾಗಿದೆ. ಮಲೆನಾಡಲ್ಲಿ ಭಾರೀ ಗಾಳಿ ಜೊತೆ ನಿರಂತರವಾಗಿ ಮಳೆ ಸುರಿಯುತ್ತಿದೆ.
ಕುಸಿದು ಬಿದ್ದ ಕುರಿ ಶೆಡ್: ಮಲೆನಾಡಲ್ಲಿ ಗಾಳಿ–ಮಳೆ ಅಬ್ಬರ ಮುಂದುವರಿದಿದ್ದು, ಭಾರೀ ಗಾಳಿಗೆ ಕುರಿ ಶೆಡ್ ಕುಸಿದು ಬಿದ್ದಿರುವ ಘಟನೆ ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿ ಗ್ರಾಮದಲ್ಲಿ ನಡೆದಿದೆ. ಕುರಿ ಶೆಡ್ ಕುಸಿದು ಬಿದ್ದ ಪರಿಣಾಮ 3 ಕುರಿ ಸಾವುವನ್ನಪ್ಪಿದ್ದು, ಹಲವು ಕುರಿಗೆ ಗಾಯವಾಗಿದೆ. ಚಕ್ಕಮಕ್ಕಿ ಗ್ರಾಮದ ಹಕ್ಕಿಂ ಎಂಬುವರ ಕುರಿ ಶೆಡ್ ಕುಸಿದು ಬಿದ್ದು ಹಾನಿಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD