12:37 AM Wednesday 20 - August 2025

ಚಿಕ್ಕಮಗಳೂರು: ಬಸ್ ಹರಿದು ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯರ ಪೈಕಿ ಓರ್ವ ಬಾಲಕಿ ದಾರುಣ ಸಾವು

chikkamagaluru
07/09/2023

ಚಿಕ್ಕಮಗಳೂರು: ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಶಾಲಾ ಮಕ್ಕಳಿಗೆ ಖಾಸಗಿ ಬಸ್ ಡಿಕ್ಕಿಯಾದ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ವಿದ್ಯಾರ್ಥಿನಿಯರ ಪೈಕಿ 15 ವರ್ಷದ ಬಾಲಕಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಬಾವಿಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ 9 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಂಜು-ಲತಾ ದಂಪತಿಯ ಪುತ್ರಿ ತುಳಸಿ(15) ಮೃತಪಟ್ಟ ಬಾಲಕಿಯಾಗಿದ್ದಾಳೆ.

ತರೀಕೆರೆ ತಾಲೂಕಿನ ಸೀತಾಪುರ ಕಾವಲು ನಿವಾಸಿ  ತುಳಸಿ ತಂದೆ-ತಾಯಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮಗಳ ಸಾವಿನಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ.,

ಘಟನೆಯ ವಿವರ:

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕಾವಲ್ ದುಗ್ಲಾಪುರ ಗೇಟ್ ಬಳಿಯಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಶಾಲಾ ಮಕ್ಕಳ ಮೇಲೆ ಖಾಸಗಿ ಬಸ್ಸೊಂದು  ಇಂದು ಬೆಳಗ್ಗೆ ಹರಿದಿದೆ.

ಘಟನೆಯಲ್ಲಿ ತುಳಸಿ (15) ನಿವೇದಿತ (14) ಎಂಬ ಇಬ್ಬರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ತಕ್ಷಣವೇ ತುರ್ತು ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ರವಾನಿಸಲಾಗಿತ್ತು. ಘಟನೆ ವೇಳೆ ಸ್ಥಳದಲ್ಲಿದ್ದ ಐವರು ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.

ಓವರ್ ಸ್ಪೀಡ್ ನಿಂದ ಕಂಟ್ರೋಲ್ ತಪ್ಪಿದ ಖಾಸಗಿ ಬಸ್ ರಸ್ತೆ ಬದಿಗೆ ಸರಿದು ಸಮೀಪದಲ್ಲಿದ್ದ ಮನೆಗಳ ಕಡೆಗೆ ನುಗ್ಗಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಮನೆಯೊಂದರ ಮೇಲ್ಛಾವಣಿ ಸಂಪೂರ್ಣವಾಗಿ ಹಾನಿಯಾಗಿದೆ.

ನಿಯಂತ್ರಣ ತಪ್ಪಿದ ಬಸ್ ಕಂಡು ರಸ್ತೆ ಬದಿ ಇದ್ದ ಪ್ರಯಾಣಿಕರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಆದರೆ ಇಬ್ಬರು ವಿದ್ಯಾರ್ಥಿನಿಯರು ಅಪಘಾತಕ್ಕೆ ಸಿಲುಕಿದ್ದಾರೆ. ಘಟನಾ ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version