ಶೃಂಗೇರಿ: ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಒತ್ತಾಯಿಸಿ ಪೌರ ಕಾರ್ಮಿಕ ಹಿತರಕ್ಷಣಾ ಸಮಿತಿ ಪ್ರತಿಭಟನೆ

ಶೃಂಗೇರಿ: ಹೊರಗುತ್ತಿಗೆ ಚಾಲಕರು ಹಾಗೂ ದಿನಗೂಲಿ ನೌಕರರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಶೃಂಗೇರಿಯಲ್ಲಿ ಪೌರ ಕಾರ್ಮಿಕ ಹಿತರಕ್ಷಣಾ ಸಮಿತಿ ಪ್ರತಿಭಟನೆ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಶೃಂಗೇರಿ ಪಟ್ಟಣ ಪಂಚಾಯತ್ ನಲ್ಲಿ 15 ಪೌರ ಕಾರ್ಮಿಕ ಹುದ್ದೆ ಮಂಜೂರಾಗಿದೆ. ಆದ್ರೆ ಕೇವಲ ಎರಡು ಜನರು ಮಾತ್ರವೇ ಖಾಯಂ ನೌಕರರಿದ್ದಾರೆ. ಮಂಜೂರಾತಿ ಹುದ್ದೆ 20 ಇದ್ದು, ಅದರಲ್ಲಿ, ನೇರ ಪಾವ್ತಿ 9 ಜನ, 1 ದಿನಗೂಲಿ, 2 ಹೊರಗುತ್ತಿಗೆ, 1 ಡ್ರೈವರ್ ಇದ್ದಾರೆ. ಯಾತ್ರಾ ಸ್ಥಳವಾಗಿರುವ ಶೃಂಗೇರಿಯಂತಹ ಪಟ್ಟಣವನ್ನು ಸ್ವಚ್ಛವಾಗಿಡಲು ಸಿಬ್ಬಂದಿಯ ಅಗತ್ಯವಿದೆ. ಆದ್ರೆ, ಖಾಯಂ ನೌಕರರಿಲ್ಲದೇ ಪ್ರಸ್ತುತ ಸ್ವಚ್ಛತಾ ಕಾರ್ಯಕ್ಕೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ, ಬೀರೂರು, ಮೂಡಿಗೆರೆ, ನರಸಿಂಹರಾಜಪುರ, ಪಟ್ಟಣ ಪಂಚಾಯತ್ ಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಖಾಯಂಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಆದ್ರೆ ಶೃಂಗೇರಿ ಪಟ್ಟಣ ಪಂಚಾಯತ್ ಹೊರ ಗುತ್ತಿಗೆ ನೌಕರರನ್ನು ಇನ್ನೂ ಖಾಯಂಗೊಳಿಸಿಲ್ಲ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.
ಸುಮಾರು 20 ವರ್ಷಗಳಿಂದಲೂ ಶೃಂಗೇರಿ ಪಟ್ಟಣದ ಸ್ವಚ್ಛತೆಯಲ್ಲಿ ಭಾಗಿಯಾಗಿರುವ, ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ, ಕೊವಿಡ್ ಸಮಯದಲ್ಲಿ ಕೂಡ ಕಡಿಮೆ ವೇತಕ್ಕೆ ಸೇವೆ ಸಲ್ಲಿಸಿರುವ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಲು ಸರ್ಕಾರದ 2020ರ ಪೌರ ಸೇವಾ ನೌಕರರ ಖಾಯಮಾತಿ ಆದೇಶವನ್ನು ವಿಸ್ತರಿಸಿ ಆದೇಶಿಸಲು ಸರ್ಕಾರ ಕೂಡಲೇ ಕ್ರಮವಹಿಸುವಂತೆ ಪ್ರತಿಭಟನಾಕಾರರು ಸರ್ಕಾರಕ್ಕೆ ಇದೇ ವೇಳೆ ಮನವಿ ಮಾಡಿದರು.