9:31 AM Thursday 23 - October 2025

ಮಂಗಳೂರು: ಕೆಣಕಿದ ಬಿಜೆಪಿ ಶಾಸಕಗೆ ವೇದಿಕೆಯಲ್ಲೇ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ!

cm siddaramaiah
17/05/2025

ಮಂಗಳೂರು: ಸರ್ಕಾರಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಕೆಣಕಿದ ಬಿಜೆಪಿ ಶಾಸಕನಿಗೆ ವೇದಿಕೆಯಲ್ಲೇ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿರುವ ಘಟನೆ ಮಂಗಳೂರಿನ ಪಡೀಲ್ ನ ‘ಪ್ರಜಾ ಸೌಧ’ ಉದ್ಘಾಟನೆ ಕಾರ್ಯಕ್ರಮದಲ್ಲಿ ನಡೆದಿದೆ.

ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್, ಸಿದ್ದರಾಮಯ್ಯ ಅವರು ಮಾತನಾಡುವುದಕ್ಕೆ ಮುನ್ನ ತಮ್ಮ ಭಾಷಣದಲ್ಲಿ ಸ್ಮಾರ್ಟ್ ಸಿಟಿ ಪ್ರಧಾನಿ ಮೋದಿಯವರ ಕನಸಿನ ಕೂಸು. ಪ್ರಧಾನಿ ಸ್ಮಾರ್ಟ್ ಸಿಟಿ ಯೋಜನೆ ಕೊಡದಿದ್ದರೆ ಈ ಯೋಜನೆಯೇ ಇರುತ್ತಿದ್ದಿಲ್ಲ ಎಂದು ಹೇಳಿದ್ದರು.

ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಿಸ್ಟರ್ ಕಾಮತ್. ನನ್ನ ಸೌಭಾಗ್ಯ ಏನೆಂದರೆ ಈ ಕಟ್ಟಡಕ್ಕೆ ಗುದ್ದಲಿ ಪೂಜೆ ಮಾಡಿದ್ದೂ ನಾನೇ, ಇವತ್ತು ಉದ್ಘಾಟನೆ ಮಾಡಿದ್ದು ನಾನೇ. ನಿಮ್ಮ ಭಾಷಣದಲ್ಲಿ ಸ್ಮಾರ್ಟ್ ಸಿಟಿ ಪ್ರಧಾನಿ ಮೋದಿಯವರ ಕನಸು ಎಂದು ನೀವು ಹೇಳಿದ್ರಿ. ಅದು ನಿಜ. ಆದರೆ, ನಾವೂ ರಾಜ್ಯ ಸರ್ಕಾರವೂ ಕೂಡ ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಶೇ.50ರಷ್ಟು ಅನುದಾನ ಕೊಡ್ತಿದ್ದೇವೆ ಎನ್ನುವುದು ಗೊತ್ತಿದೆಯಲ್ವಾ? ಎಂದು ಪ್ರಶ್ನೆ ಮಾಡಿದರು.

ನಾಲ್ಕು ವರ್ಷ ರಾಜ್ಯದಲ್ಲಿ ನೀವು ಅಧಿಕಾರದಲ್ಲಿದ್ರಲ್ವಾ. ಆಗ ಯಾಕೆ ಇದನ್ನು ಮಾಡಿಲ್ಲ. ಆಗಲೂ ಸ್ಮಾರ್ಟ್ ಸಿಟಿ ಯೋಜನೆ ಇತ್ತು. ಆಗ ಯಾಕೆ ಖರ್ಚು ಮಾಡಲಿಲ್ಲ? ಆಗ ಖರ್ಚು ಮಾಡಿದ್ದಿದ್ದರೆ ಇಷ್ಟು ದಿನ ಬೇಕಿತ್ತಾ, 2015ರಲ್ಲಿ ಇದಕ್ಕೆ ಶಂಕು ಸ್ಥಾಪನೆ ಆಗಿದ್ದು ಎಂದರು.
ಈ ‘ಪ್ರಜಾ ಸೌಧ’ ನಿರ್ಮಾಣಕ್ಕೆ ಕಾರಣ ರಮಾನಾಥ ರೈ. ಜಿಲ್ಲಾಡಳಿತಕ್ಕೆ ಹೊಸ ಕಚೇರಿ ಬೇಕು ಎಂದು ನನ್ನ ಮೇಲೆ ಒತ್ತಡ ತಂದದ್ದು ರಮಾನಾಥ ರೈ. ಇತಿಹಾಸ ತಿಳಿದುಕೊಳ್ಳಿ. ಇತಿಹಾಸವನ್ನು ತಿರುಚಿ ಹೇಳ್ಬೇಡಿ. ಯಾವತ್ತೂ ಸುಳ್ಳು ಹೇಳಬಾರದು. ಜನ ನಂಬಬೇಕಲ್ಲಾ. ರಾಜಕೀಯ ಮಾಡೋಣ. ಆದರೆ, ಅಭಿವೃದ್ಧಿ ಕೆಲಸದಲ್ಲಿ ರಾಜಕೀಯ ಬೇಡ ಎಂದರು.

ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 4.5 ಲಕ್ಷ ಕೋಟಿ ತೆರಿಗೆ ಕೊಡುತ್ತೇವೆ. ಕೇಂದ್ರ ರಾಜ್ಯಕ್ಕೆ ವಾಪಾಸ್ ಕೊಡುವುದು, ಸ್ಮಾರ್ಟ್ ಸಿಟಿ ಯೋಜನೆ ಸೇರಿ ಕೇವಲ ₹65 ಸಾವಿರ ಕೋಟಿ. ಶೇ15-16 ರಷ್ಟು ಮಾತ್ರ ವಾಪಾಸ್ ಕೊಡುತ್ತಿದೆ. ಇದು ಕೇಂದ್ರವು ನಮ್ಮ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಅಲ್ಲವೇ? ಪ್ರಧಾನಿ ಮೋದಿಯವರಿಗೆ ಹೇಳಿ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ನಿಲ್ಲಿಸುವ ಕೆಲಸವನ್ನು ಇಲ್ಲಿನ ಸಂಸದರು, ಶಾಸಕರು ಮಾಡಬೇಕು. ದಕ್ಷಿಣ ಕನ್ನಡ ಜಿಲ್ಲೆ ಸದ್ಯದಲ್ಲೇ ಪೋಡಿಮುಕ್ತ ಜಿಲ್ಲೆ ಆಗಲಿದೆ. ಸಚಿವ ಕೃಷ್ಣಬೈರೇಗೌಡರು ವಿಶೇಷ ಕಾಳಜಿ, ಸಾಕಷ್ಟು ಶ್ರಮ ವಹಿಸಿ ಜಿಲ್ಲೆಯನ್ನು ಪೋಡಿಮುಕ್ತ ಮಾಡುವ ದಿಕ್ಕಿನಲ್ಲಿ ಕೆಲಸಗಳು ಆಗಿವೆ. ಅತ್ಯಂತ ಪ್ರಜ್ಞಾವಂತರೇ ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆಗಳು ನಡೆಯಬಾರದು. ಮನುಷ್ಯರು ಮನುಷ್ಯರನ್ನು ಪ್ರೀತಿಸುವ ಸರ್ವ ಜನಾಂಗದ ಶಾಂತಿಯ ತೋಟ ನಮ್ಮದು. ಈ ಸಮಾಜವನ್ನು ನಾವು ಇನ್ನಷ್ಟು ಗಟ್ಟಿಗೊಳಿಸೋಣ. ಜೊತೆಗೆ ಅಸಮಾನತೆಯ ಸಮಾಜವನ್ನು ಸುಧಾರಿಸಿ ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಹೆಜ್ಜೆ ಹಾಕೋಣ. ನಾವು ನುಡಿದಂತೆ ನಡೆದಿದ್ದೇವೆ. ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಕೊಡುವ ಭರವಸೆ ನೀಡಿದ್ದೆವು. ಅದರಂತೆ ಪುತ್ತೂರಿಗೆ ಮೆಡಿಕಲ್ ಕಾಲೇಜು ಕೊಟ್ಟಿದ್ದೇವೆ. ಸದ್ಯ 250 ಬೆಡ್ ಗಳ ಆಸ್ಪತ್ರೆ ಮಾಡುತ್ತೇವೆ. ಆಮೇಲೆ ಮತ್ತೆ 250 ಬೆಡ್ ಗಳನ್ನು ಹೆಚ್ಚುವರಿಯಾಗಿ ವಿಸ್ತರಿಸುತ್ತೇವೆ ಎಂದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

 

ಇತ್ತೀಚಿನ ಸುದ್ದಿ

Exit mobile version