‘ಕಾಕ್ರೋಚ್ ಜನತಾ ಪಾರ್ಟಿ’ ಎಕ್ಸ್ ಖಾತೆ ಬ್ಲಾಕ್: ಕೇಂದ್ರ ಸರ್ಕಾರ ಮತ್ತು ‘ಎಕ್ಸ್’ ಸಂಸ್ಥೆಗೆ ದೆಹಲಿ ಹೈಕೋರ್ಟ್ ನೋಟಿಸ್

cockroach janta party
29/05/2026

ನವದೆಹಲಿ: ಯುವ ಜನರಲ್ಲಿ ಭಾರೀ ವೈರಲ್ ಆಗಿದ್ದ ವ್ಯಂಗ್ಯಚಿತ್ರ ಮತ್ತು ಮೀಮ್ಸ್ ಆಧಾರಿತ ಡಿಜಿಟಲ್ ಚಳವಳಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಯ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯನ್ನು ಬ್ಲಾಕ್ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ, ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರ ಮತ್ತು ಸಾಮಾಜಿಕ ಮಾಧ್ಯಮ ಸಂಸ್ಥೆ ‘ಎಕ್ಸ್’ಗೆ ಶುಕ್ರವಾರ (ಮೇ 29) ನೋಟಿಸ್ ಜಾರಿ ಮಾಡಿದೆ.

ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಅವರ ಪೀಠವು ಈ ನೋಟಿಸ್ ನೀಡಿದ್ದು, ತಕ್ಷಣವೇ ಖಾತೆಯನ್ನು ಮರುಸ್ಥಾಪಿಸಲು ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದೆ. ಬದಲಿಗೆ, ಐಟಿ ನಿಯಮಗಳ ಅಡಿಯಲ್ಲಿ ರಚಿಸಲಾದ ಪರಿಶೀಲನಾ ಸಮಿತಿಯನ್ನು (Review Committee) ಸಂಪರ್ಕಿಸುವಂತೆ ಅರ್ಜಿದಾರರಿಗೆ ಸೂಚಿಸಿದೆ.

ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ರಾಷ್ಟ್ರೀಯ ಭದ್ರತೆಯ ಕಾರಣಗಳನ್ನು ನೀಡಿ ಕೇಂದ್ರ ಸರ್ಕಾರವು ಮೇ 21 ರಂದು ತಮ್ಮ ಅಧಿಕೃತ ಎಕ್ಸ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಿದೆ ಎಂದು ಅವರು ಆರೋಪಿಸಿದ್ದರು. ಅಲ್ಲದೆ, ತಮ್ಮ ಇನ್‌’ಸ್ಟಾಗ್ರಾಮ್ ಪೇಜ್, ವೈಯಕ್ತಿಕ ಖಾತೆಗಳು ಹ್ಯಾಕ್ ಆಗಿವೆ ಮತ್ತು ವೆಬ್‌ ಸೈಟ್ ಅನ್ನು ಕೂಡ ನಿಷ್ಕ್ರಿಯಗೊಳಿಸಲಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ದೇಶದ ನಿರುದ್ಯೋಗ, ಶಿಕ್ಷಣ ವ್ಯವಸ್ಥೆ ಮತ್ತು ನೀಟ್ (NEET–UG) ಪೇಪರ್ ಲೀಕ್ ಹಗರಣಗಳ ವಿರುದ್ಧ ಮೀಮ್ಸ್ ಮತ್ತು ಹಾಸ್ಯದ ಮೂಲಕ ಈ ಖಾತೆಯು ಯುವ ಪೀಳಿಗೆ ಹಾಗೂ ಮಿಲೇನಿಯಲ್ಸ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಕೇವಲ ಕೆಲವೇ ದಿನಗಳಲ್ಲಿ ಈ ಡಿಜಿಟಲ್ ಚಳವಳಿಗೆ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಸದಸ್ಯರಾಗಿ ನೋಂದಾಯಿಸಿಕೊಂಡಿದ್ದರು. ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಇವರು ನಡೆಸಿದ ಆನ್‌ ಲೈನ್ ಅಭಿಯಾನಕ್ಕೆ 6 ಲಕ್ಷಕ್ಕೂ ಹೆಚ್ಚು ಜನರು ಸಹಿ ಹಾಕಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಈ ಖಾತೆಯು ಬಿಜೆಪಿ ಪಕ್ಷದ ಅಧಿಕೃತ ಪೇಜ್‌ಗಿಂತಲೂ ಹೆಚ್ಚಿನ ಫಾಲೋವರ್ಸ್ ಗಳಿಸಿ ಗಮನ ಸೆಳೆದಿತ್ತು.

ಕೇಂದ್ರ ಸರ್ಕಾರದ ಈ ಕ್ರಮವನ್ನು “ಸರ್ವಾಧಿಕಾರಿ ಧೋರಣೆ” ಎಂದು ಕರೆದಿರುವ ಅಭಿಜೀತ್ ದಿಪ್ಕೆ, ಯುವಕರು ತಮ್ಮ ಉತ್ತಮ ಭವಿಷ್ಯಕ್ಕಾಗಿ ಧ್ವನಿ ಎತ್ತಿದ್ದನ್ನೇ ಸರ್ಕಾರ ಗುರಿಯಾಗಿಸಿಕೊಂಡಿದೆ ಎಂದು ಕೋರ್ಟ್‌ನಲ್ಲಿ ವಾದಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version