ಸಿದ್ದರಾಮಯ್ಯ ರಾಜೀನಾಮೆ ಬಹುತೇಕ ಖಚಿತ, ಡಿಕೆಶಿ ಪಟ್ಟಾಭಿಷೇಕಕ್ಕೆ ಕೌಂಟ್ ಡೌನ್! | 4 ಡಿಸಿಎಂ ಹುದ್ದೆ ಸೃಷ್ಟಿ, ಕೆಪಿಸಿಸಿಗೆ ಹೊಸ ಸಾರಥಿ
ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಕರ್ನಾಟಕ ಕಾಂಗ್ರೆಸ್‌ನಲ್ಲಿ ನಿರಂತರವಾಗಿ ಕೇಳಿಬರುತ್ತಿದ್ದ ಸಿಎಂ ಹುದ್ದೆ ಬದಲಾವಣೆ ಹಾಗೂ ‘ಅಧಿಕಾರ ಹಂಚಿಕೆ ಸೂತ್ರ’ದ ಪ್ರಹಸನ ಕೊನೆಗೂ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಮೇ 31ರಂದು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ದಟ್ಟವಾಗಿದೆ.
ರಾಜ್ಯ ರಾಜಧಾನಿಯಲ್ಲಿ ಗುರುವಾರ ಮುಂಜಾನೆಯಿಂದಲೇ ದಿಢೀರ್ ರಾಜಕೀಯ ಬೆಳವಣಿಗೆಗಳು ಸಂಭವಿಸುತ್ತಿದ್ದು, ಸಚಿವರ ಸಭೆ, ಹೈಕಮಾಂಡ್ ಮಾಸ್ಟರ್ ಪ್ಲ್ಯಾನ್, ರಾಜ್ಯಪಾಲರ ದಿಢೀರ್ ಮುಂಬೈ ಪ್ರಯಾಣ ಮತ್ತು ‘ಅಹಿಂದ’ ಸಂಘಟನೆಗಳ ಆಕ್ರೋಶದಿಂದಾಗಿ ಇಡೀ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಯಾಗಿದೆ.
‘ಕಾವೇರಿ’ ನಿವಾಸದಲ್ಲಿ ವಿದಾಯದ ಉಪಹಾರ ಕೂಟ:
ನಾಯಕತ್ವ ಬದಲಾವಣೆಯ ಸ್ಪಷ್ಟ ಮುನ್ಸೂಚನೆಯಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮುಂಜಾನೆ ತಮ್ಮ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಮಹತ್ವದ ಉಪಹಾರ ಕೂಟವನ್ನು ಆಯೋಜಿಸಿದ್ದರು. ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿರಿಯ ಸಚಿವರಾದ ಪ್ರಿಯಾಂಕ್ ಖರ್ಗೆ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ, ಎಚ್.ಕೆ. ಪಾಟೀಲ್ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗಿಯಾಗಿದ್ದರು. ಮಸಾಲೆ ದೋಸೆ, ಇಡ್ಲಿ, ವಡೆ, ಖಾರಾಬಾತ್ ಒಳಗೊಂಡ ಸಭೆಯಲ್ಲಿ ಮುಖ್ಯಮಂತ್ರಿಗಳು ತಮ್ಮ ವಿದಾಯದ ಭಾಷಣ ಮಾಡಿದ್ದು, ಎಲ್ಲಾ ಸಚಿವರ ಸಹಕಾರಕ್ಕೆ ಧನ್ಯವಾದ ಸಮರ್ಪಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಸಭೆಗೆ ತೆರಳುವ ಮುನ್ನ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, “ಮುಖ್ಯಮಂತ್ರಿಗಳು ಎಲ್ಲಾ ಸಚಿವರನ್ನು ಬ್ರೇಕ್‌ಫಾಸ್ಟ್ ಮೀಟಿಂಗ್‌ಗೆ ಕರೆದಿದ್ದಾರೆ. ರಾಜೀನಾಮೆ ನೀಡುವ ಮುನ್ನ ಎಲ್ಲ ಸಚಿವರ ಸಹಕಾರಕ್ಕೆ ಧನ್ಯವಾದ ಹೇಳಲು ಅವರು ಬಯಸಿದ್ದಾರೆ” ಎಂದು ಅಧಿಕೃತವಾಗಿ ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಅವರಿಗೆ ದೆಹಲಿಯಲ್ಲಿ ಹೈಕಮಾಂಡ್ ಬೇರೆ ಜವಾಬ್ದಾರಿ ಅಥವಾ ರಾಜ್ಯಸಭಾ ಸ್ಥಾನದ ಆಫರ್ ನೀಡಿದೆಯೇ ಎಂಬ ಪ್ರಶ್ನೆಗೆ, ಅದು ಹೈಕಮಾಂಡ್ ನಿರ್ಧಾರ ಎಂದು ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್!:
ಒಂದೆಡೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲು ಸಜ್ಜಾಗುತ್ತಿದ್ದರೆ, ಇನ್ನೊಂದೆಡೆ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಧ್ಯರಾತ್ರಿ 11:45ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಿಢೀರ್ ಮುಂಬೈಗೆ ಪ್ರಯಾಣ ಬೆಳೆಸಿರುವುದು ಭಾರೀ ಕುತೂಹಲ ಮೂಡಿಸಿದೆ. ಸಂಬಂಧಿಕರ ಅನಾರೋಗ್ಯದ ಕಾರಣ ನೀಡಿ ಅವರು ಮುಂಬೈಗೆ ತೆರಳಿದ್ದು, ಅಲ್ಲಿಂದ ಇಂದೋರ್ ಗೆ ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ.
ವಿಶೇಷವೆಂದರೆ, ಸಿಎಂ ಸಿದ್ದರಾಮಯ್ಯ ಅವರು ಇಂದು ರಾಜ್ಯಪಾಲರ ಭೇಟಿಗೆ ಸಮಯಾವಕಾಶ ಕೋರಿದ್ದರು. ಇದಕ್ಕೆ ಸ್ಪಂದಿಸಿದ್ದ ರಾಜಭವನ ಗುರುವಾರ ಬೆಳಗ್ಗೆ 11:30 ಹಾಗೂ ಮಧ್ಯಾಹ್ನ 3 ಗಂಟೆಯ ನಂತರ ಭೇಟಿಗೆ ಅವಕಾಶ ನೀಡಿತ್ತು. ಆದರೆ ಭೇಟಿಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ರಾಜ್ಯಪಾಲರು ರಾಜಧಾನಿ ತೊರೆದಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ರಾಜ್ಯಪಾಲರು ಇಂದು ಮಧ್ಯಾಹ್ನದ ಬಳಿಕ ಮರಳಿ ಬಂದರೆ, ಸಂಜೆ ವೇಳೆ ಸಿಎಂ ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸುವ ಸಾಧ್ಯತೆ ಇದೆ.
ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್:
ಸಿದ್ದರಾಮಯ್ಯ ಅವರ ನಿರ್ಗಮನದ ಬಳಿಕ ಅವರ ಬಣ ಹಾಗೂ ವಿವಿಧ ಸಮುದಾಯಗಳಲ್ಲಿ ಉಂಟಾಗಬಹುದಾದ ತೀವ್ರ ಅಸಮಾಧಾನವನ್ನು ತಣಿಸಲು ಕಾಂಗ್ರೆಸ್ ಹೈಕಮಾಂಡ್ ಹೊಸದೊಂದು ‘ಮಾಸ್ಟರ್‌ಪ್ಲ್ಯಾನ್’ ರೂಪಿಸಿದೆ. ರಾಜ್ಯದಲ್ಲಿ ಜಾತಿ ಸಮೀಕರಣವನ್ನು ಸರಿದೂಗಿಸಲು ಕನಿಷ್ಠ 3 ರಿಂದ 4 ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಗಳನ್ನು ಸೃಷ್ಟಿಸಲು ಚಿಂತನೆ ನಡೆಸಲಾಗುತ್ತಿದೆ.
ಇದರ ಪ್ರಕಾರ ಲಿಂಗಾಯತ, ದಲಿತ, ಮುಸ್ಲಿಂ ಹಾಗೂ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ನೀಡಲು ಸಚಿವರಾದ ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಜಮೀರ್ ಅಹ್ಮದ್ ಖಾನ್ ಹಾಗೂ ಸಿದ್ದರಾಮಯ್ಯ ಅವರ ಪುತ್ರ, ಎಂಎಲ್‌ಸಿ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೆಸರುಗಳು ಡಿಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ ಎನ್ನಲಾಗಿದೆ.
ಕೆಪಿಸಿಸಿಗೆ ಹೊಸ ಸಾರಥ್ಯ:
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದು ಗಟ್ಟಿಯಾಗುತ್ತಿದ್ದಂತೆ, ಅವರು ಪ್ರಸ್ತುತ ಹೊಂದಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ನಾಯಕರ ಹುಡುಕಾಟ ಆರಂಭವಾಗಿದೆ. ಉತ್ತರ ಕರ್ನಾಟಕದ ಪ್ರಭಾವಿ ಅಹಿಂದ ನಾಯಕ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಅತ್ಯಂತ ಬಲವಾಗಿ ಕೇಳಿಬರುತ್ತಿದೆ. ಹಿಂದುಳಿದ ಹಾಗೂ ದಲಿತ ವರ್ಗಗಳನ್ನು ಒಗ್ಗೂಡಿಸುವ ಮತ್ತು ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಬಲಪಡಿಸುವ ಸಾಮರ್ಥ್ಯ ಹೊಂದಿರುವ ಕಾರಣ ಹೈಕಮಾಂಡ್ ಇವರತ್ತ ಒಲವು ತೋರಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ, “ಪಕ್ಷ ಯಾವ ಜವಾಬ್ದಾರಿ ನೀಡಿದರೂ ಸ್ವೀಕರಿಸಲು ಸಿದ್ಧ” ಎಂದು ತಿಳಿಸಿದ್ದಾರೆ. ಲೋಕಸಭಾ ಚುನಾವಣೆಯ ನಂತರ ಸರ್ಕಾರ ಮತ್ತು ಸಂಘಟನೆಯ ಅಧಿಕಾರವನ್ನು ಪ್ರತ್ಯೇಕಿಸಬೇಕು ಎಂಬ ಒತ್ತಡ ಸಿದ್ದರಾಮಯ್ಯ ಬಣದಿಂದ ತೀವ್ರವಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.
ಹೈಕಮಾಂಡ್‌ಗೆ ‘ಅಹಿಂದ’ ಎಚ್ಚರಿಕೆ:
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಕ್ರಿಯೆ ಚುರುಕಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷಕ್ಕೆ ಮೊದಲ ಆಂತರಿಕ ಬಿಸಿ ತಟ್ಟಿದೆ. ಕರ್ನಾಟಕ ರಾಜ್ಯ ಶೋಷಿತ ವರ್ಗಗಳ ಒಕ್ಕೂಟ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟ (ಅಹಿಂದ) ಹೈಕಮಾಂಡ್ ನಡೆಗೆ ತೀವ್ರ ಆಕ್ರೋಶ ಹೊರಹಾಕಿದೆ.
ಅಹಿಂದ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, “ಯಾವುದೇ ಆರೋಪಗಳಿಲ್ಲದ ಸಿದ್ದರಾಮಯ್ಯ ಅವರಂತಹ ಹಿರಿಯ ನಾಯಕರನ್ನು ಯಾವುದೇ ಕಾರಣವಿಲ್ಲದೆ ಬದಲಾಯಿಸಿದರೆ ನಾವು ಮೌನವಾಗಿರಲು ಸಾಧ್ಯವಿಲ್ಲ. ಅಹಿಂದ ಸಮುದಾಯಗಳ ಮತಗಳಿಂದಲೇ ಈ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ನಮ್ಮ 70 ಶೇಕಡಾ ಸಮುದಾಯದ ಬೆಂಬಲ ಶೂನ್ಯಕ್ಕೆ ಇಳಿಯುತ್ತದೆ. ನಾವು ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಲಿದ್ದೇವೆ” ಎಂದು ನೇರ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಡಿ.ಕೆ. ಶಿವಕುಮಾರ್ ಅವರ ಆಯ್ಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಮುಂದಿನ ಸಿಎಂ ಕೂಡ ಅಹಿಂದ ಸಮುದಾಯದವರೇ ಆಗಬೇಕು ಎಂದು ಒತ್ತಾಯಿಸಿದ್ದಾರೆ.
31 ಪದಾಧಿಕಾರಿಗಳ ವಜಾ!
ಮುಖ್ಯಮಂತ್ರಿ ಹುದ್ದೆಗೇರುವ ಮುನ್ನವೇ ಪಕ್ಷದ ಸಂಘಟನೆಯಲ್ಲಿ ಶಿಸ್ತು ಮೂಡಿಸಲು ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಭರ್ಜರಿ ಆಪರೇಷನ್ ನಡೆಸಿದ್ದಾರೆ. ಪಕ್ಷದ ನಿಯಮಾವಳಿ ಮತ್ತು ಶಿಸ್ತು ಉಲ್ಲಂಘಿಸಿದ ಆರೋಪದ ಮೇಲೆ ತಕ್ಷಣದಿಂದಲೇ ಜಾರಿಗೆ ಬರುವಂತೆ 3 ಕೆಪಿಸಿಸಿ ಉಪಾಧ್ಯಕ್ಷರು ಹಾಗೂ 29 ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಒಟ್ಟು 31 ಪದಾಧಿಕಾರಿಗಳನ್ನು ಹುದ್ದೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮೇ 24 ರಂದು ಬೆಂಗಳೂರಿನ ಹೊರವಲಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ನಡೆದ ಮಹತ್ವದ ಪೂರ್ವಭಾವಿ ಸಭೆಗೆ ಗೈರಾಗಿದ್ದವರ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಸೂಚನೆ ಮೇರೆಗೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ವಜಾಗೊಂಡವರಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ಕೆ. ಶಿವಮೂರ್ತಿ, ಬಾಬುರಾವ್ ಜಗೀರ್ದಾರ್, ಎಂ.ಸಿ. ವೇಣುಗೋಪಾಲ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಪ್ರಖರ ವಕ್ತಾರ ನಿಕೇತ್ ರಾಜ್ ಮೌರ್ಯ, ನಟಿ ಭಾವನಾ ರಾಮಣ್ಣ ಮುಂತಾದ ಪ್ರಮುಖ ನಾಯಕರಿದ್ದಾರೆ. ಈ ಮೂಲಕ ತಾವು ನಾಯಕತ್ವ ವಹಿಸಿಕೊಳ್ಳುವ ಮುನ್ನ ಪಕ್ಷದಲ್ಲಿ ಭಿನ್ನಮತ ಅಥವಾ ಬೇಜವಾಬ್ದಾರಿತನಕ್ಕೆ ಆಸ್ಪದವಿಲ್ಲ ಎಂಬ ಖಡಕ್ ಸಂದೇಶವನ್ನು ಡಿ.ಕೆ. ಶಿವಕುಮಾರ್ ರವಾನಿಸಿದ್ದಾರೆ.
ಒಟ್ಟಾರೆಯಾಗಿ, ಮುಂದಿನ 24 ಗಂಟೆಗಳ ಅವಧಿ ಕರ್ನಾಟಕ ರಾಜಕೀಯದ ಭವಿಷ್ಯದ ದಿಕ್ಸೂಚಿಯನ್ನು ನಿರ್ಧರಿಸಲಿದ್ದು, ಇಡೀ ರಾಜ್ಯದ ಜನತೆಯ ಕಣ್ಣು ಈಗ ರಾಜಭವನ ಹಾಗೂ ಕಾವೇರಿ ನಿವಾಸದತ್ತ ನೆಟ್ಟಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























