ವಾಣಿಜ್ಯ ಎಲ್‌ ಪಿಜಿ ಸಿಲಿಂಡರ್ ಕೊರತೆ: ಇದು ಬಿಜೆಪಿ ಸೃಷ್ಟಿಸಿದ ಬಿಕ್ಕಟ್ಟು: ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

priyank kharge
14/03/2026

ಬೀದರ್: ದೇಶದಲ್ಲಿ ಉಂಟಾಗಿರುವ ವಾಣಿಜ್ಯ ಎಲ್‌ ಪಿಜಿ (LPG) ಸಿಲಿಂಡರ್‌ಗಳ ತೀವ್ರ ಕೊರತೆಯು ಬಿಜೆಪಿ ಸರ್ಕಾರವೇ ರೂಪಿಸಿರುವ ಕೃತಕ ಬಿಕ್ಕಟ್ಟು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿನಾಶಕಾರಿ ನೀತಿಗಳೇ ಈ ಪರಿಸ್ಥಿತಿಗೆ ಕಾರಣ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆಪ್ತ ಉದ್ಯಮಿ ಸ್ನೇಹಿತರನ್ನು ಸಮಾಧಾನಪಡಿಸಲು ದೇಶದ ವಿದೇಶಾಂಗ ನೀತಿಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಇಂದು ದೇಶದ ಸಾಮಾನ್ಯ ಜನತೆ ಮತ್ತು ಉದ್ಯಮಿಗಳು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಖರ್ಗೆ ಟೀಕಿಸಿದರು.

ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ನಡೆಯುತ್ತಿದ್ದರೂ ಪ್ರಧಾನಿ ಮೌನವಾಗಿದ್ದಾರೆ. ಯುದ್ಧಕ್ಕೆ ಎರಡು ದಿನ ಮುನ್ನ ಇಸ್ರೇಲ್‌ಗೆ ಭೇಟಿ ನೀಡುವ ಅಗತ್ಯವೇನಿತ್ತು? ಅಲ್ಲಿ ಪ್ರಶಸ್ತಿ ಪಡೆದ ಪ್ರಧಾನಿ, ಇರಾನ್ ನಾಯಕರ ಮೇಲಿನ ದಾಳಿಯನ್ನು ಯಾಕೆ ಖಂಡಿಸಲಿಲ್ಲ ಎಂದು ಪ್ರಶ್ನಿಸಿದರು.

ಕಳೆದ 14 ದಿನಗಳಿಂದ ಬಿಕ್ಕಟ್ಟು ನಡೆಯುತ್ತಿದ್ದರೂ ವಿದೇಶಾಂಗ ಸಚಿವ ಜೈಶಂಕರ್, ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಪ್ರಧಾನಿ ಮೋದಿ ಅವರು ಈ ಬಗ್ಗೆ ಎಷ್ಟು ಬಾರಿ ಮಾತನಾಡಿದ್ದಾರೆ? ಸಮಸ್ಯೆ ಇಲ್ಲದಿದ್ದರೆ ಅಗತ್ಯ ಸೇವಾ ನಿರ್ವಹಣಾ ಕಾಯ್ದೆಯನ್ನು (ESMA) ಯಾಕೆ ರದ್ದುಪಡಿಸಲಾಗಿದೆ ಎಂದು ಅವರು ಕೇಂದ್ರವನ್ನು ಕೆಣಕಿದರು.

ಎಲ್‌ಪಿಜಿ ಕೊರತೆಯಿಂದಾಗಿ ಮನೆಗಳಲ್ಲಿ ಪಿಎನ್‌ಜಿ (PNG) ಮತ್ತು ಹೋಟೆಲ್‌ಗಳಲ್ಲಿ ಕಲ್ಲಿದ್ದಲು ಬಳಸುವಂತೆ ಕೇಂದ್ರ ಸರ್ಕಾರ ನೀಡಿರುವ ಸಲಹೆಯು ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ ವಿರೋಧ ಪಕ್ಷಗಳ ಪ್ರತಿಭಟನೆಯನ್ನು ಟೀಕಿಸಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೂ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, ದೇಶದ ಹಿತಾಸಕ್ತಿಗಿಂತ ಉದ್ಯಮಿಗಳ ಹಿತಾಸಕ್ತಿಯೇ ಬಿಜೆಪಿಗೆ ಮುಖ್ಯವಾಗಿದೆ ಎಂದು ಆರೋಪಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version