LPG ಸಿಲಿಂಡರ್ ಅಕ್ರಮ ಸಂಗ್ರಹ, ಕಾಳಸಂತೆ ಮಾರಾಟದ ವಿರುದ್ಧ ಕಠಿಣ ಕ್ರಮ: ಗೃಹ ಸಚಿವ ಪರಮೇಶ್ವರ ಎಚ್ಚರಿಕೆ

g parameshwar
14/03/2026

ತುಮಕೂರು: ರಾಜ್ಯದಲ್ಲಿ ಎಲ್‌ ಪಿಜಿ ಸಿಲಿಂಡರ್‌ ಗಳ ಅಕ್ರಮ ಸಂಗ್ರಹಣೆ ಹಾಗೂ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಶನಿವಾರ ತಿಳಿಸಿದ್ದಾರೆ.

ಪಶ್ಚಿಮ ಏಷ್ಯಾ (ಗಲ್ಫ್ ದೇಶಗಳಲ್ಲಿ) ಸಂಘರ್ಷದ ಹಿನ್ನೆಲೆಯಲ್ಲಿ ಅನಿಲ ಪೂರೈಕೆಯಲ್ಲಿ ಅಲ್ಪಮಟ್ಟಿನ ವ್ಯತ್ಯಯ ಉಂಟಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಸಿಲಿಂಡರ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ದೂರುಗಳು ಕೇಳಿಬಂದಿವೆ.  “ಯಾರಾದರೂ ಗ್ಯಾಸ್ ಸಿಲಿಂಡರ್‌ಗಳನ್ನು ಬಚ್ಚಿಡುವುದು ಅಥವಾ ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸಿದರೆ ಅವರ ಮೇಲೆ ತಕ್ಷಣವೇ ಎಫ್‌ ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲು ರಾಜ್ಯಾದ್ಯಂತ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಜನಸಾಮಾನ್ಯರಿಗೆ ತೊಂದರೆಯಾಗುವುದನ್ನು ನಾವು ಸಹಿಸುವುದಿಲ್ಲ” ಎಂದು ಸಚಿವರು ಎಚ್ಚರಿಸಿದ್ದಾರೆ.

ಗೃಹ ಬಳಕೆಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ಸದ್ಯಕ್ಕೆ ಯಾವುದೇ ದೊಡ್ಡ ಸಮಸ್ಯೆಯಿಲ್ಲ. ಆದರೆ, ವಾಣಿಜ್ಯ (Commercial) ಸಿಲಿಂಡರ್‌ಗಳ ಪೂರೈಕೆಯಲ್ಲಿ ಸ್ವಲ್ಪ ಕೊರತೆಯಿದೆ. ಇದರಿಂದ ಹೋಟೆಲ್ ಉದ್ಯಮಕ್ಕೆ ಒಂದೆರಡು ದಿನ ತೊಂದರೆಯಾಗಬಹುದು, ಅದನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಇರಾನ್ ದೇಶವು ಭಾರತದ ಹಡಗುಗಳಿಗೆ ವಿನಾಯಿತಿ ನೀಡಿದ ಬೆನ್ನಲ್ಲೇ, ಹಾರ್ಮುಜ್ ಜಲಸಂಧಿಯ ಮೂಲಕ ಭಾರತದ ತೈಲ ಹಡಗುಗಳು ಸಂಚರಿಸುತ್ತಿವೆ. ಹೀಗಾಗಿ ಮುಂದಿನ ಕೆಲವೇ ದಿನಗಳಲ್ಲಿ ಅನಿಲ ಮತ್ತು ತೈಲ ಪೂರೈಕೆ ಸಹಜ ಸ್ಥಿತಿಗೆ ಮರಳಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಹಕರು ಭಯಭೀತರಾಗಿ ಮುಂಗಡ ಬುಕಿಂಗ್ (Panic Booking) ಮಾಡಬಾರದು ಮತ್ತು ಅನಗತ್ಯವಾಗಿ ಸಿಲಿಂಡರ್ ದಾಸ್ತಾನು ಮಾಡಬಾರದು ಎಂದು ಸರ್ಕಾರ ಮನವಿ ಮಾಡಿದೆ. ಅಕ್ರಮ ಕಂಡುಬಂದಲ್ಲಿ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆ ಅಥವಾ ಆಹಾರ ಇಲಾಖೆಗೆ ಮಾಹಿತಿ ನೀಡಬಹುದಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.\

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version