ಸಾಧ್ವಿಗಳ ಮೇಲೆ ಲೈಂಗಿಕ ದೌರ್ಜನ್ಯ ಅಪರಾಧಿ: ಗುರ್ಮೀತ್ ರಾಮ್ ರಹೀಮ್‌ ಮತ್ತೆ ಪರೋಲ್: 16ನೇ ಬಾರಿ ಜೈಲಿನಿಂದ ಬಿಡುಗಡೆ

gurmeet ram rahim
26/05/2026

ರೋಹ್ಟಕ್ (ಹರಿಯಾಣ):  ಇಬ್ಬರು ಸಾಧ್ವಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ ಗೆ ಹರಿಯಾಣ ಸರ್ಕಾರವು ಮತ್ತೊಮ್ಮೆ 30 ದಿನಗಳ ಪೆರೋಲ್ ಮಂಜೂರು ಮಾಡಿದೆ.

ಮಂಗಳವಾರ (ಮೇ 26, 2026) ಮುಂಜಾನೆ ಸುಮಾರು 6:30ರ ಸುಮಾರಿಗೆ ಆತ ರೋಹ್ಟಕ್‌ ನ ಸುನೇರಿಯಾ ಜೈಲಿನಿಂದ ಹೊರಬಂದಿದ್ದಾನೆ. 2017ರಲ್ಲಿ ಶಿಕ್ಷೆಗೆ ಒಳಗಾದ ನಂತರ ಆತ ತಾತ್ಕಾಲಿಕವಾಗಿ ಜೈಲಿನಿಂದ ಬಿಡುಗಡೆಯಾಗುತ್ತಿರುವುದು ಇದು 16ನೇ ಬಾರಿಯಾಗಿದೆ.

ರಾಮ್ ರಹೀಮ್ ಪರ ವಕೀಲ ಮತ್ತು ಡೇರಾ ವಕ್ತಾರ ಜಿತೇಂದ್ರ ಖುರಾನಾ ಈ ವಿಷಯವನ್ನು ಖಚಿತಪಡಿಸಿದ್ದು, “ಸಕ್ಷಮ ಪ್ರಾಧಿಕಾರವು ಆತನಿಗೆ 30 ದಿನಗಳ ಪೆರೋಲ್ ನೀಡಿದೆ. ಈ ಅವಧಿಯಲ್ಲಿ ಆತ ಹರಿಯಾಣದ ಶಿರಸಾದಲ್ಲಿರುವ ಡೇರಾ ಸಚ್ಚಾ ಸೌದಾ ಪ್ರಧಾನ ಕಚೇರಿಯಲ್ಲಿಯೇ ವಾಸ್ತವ್ಯ ಹೂಡಲಿದ್ದಾನೆ” ಎಂದು ತಿಳಿಸಿದ್ದಾರೆ.

ಪ್ರಸ್ತುತ ವರ್ಷದಲ್ಲಿ (2026) ರಾಮ್ ರಹೀಮ್ ಜೈಲಿನಿಂದ ಹೊರಬರುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ ಜನವರಿಯಲ್ಲಿ ಆತನಿಗೆ 40 ದಿನಗಳ ಪೆರೋಲ್ ನೀಡಲಾಗಿತ್ತು, ಫೆಬ್ರವರಿ 15 ರಂದು ಆತ ಮತ್ತೆ ಜೈಲಿಗೆ ಮರಳಿದ್ದ. ಹರಿಯಾಣದ ಕೈದಿಗಳ ತಾತ್ಕಾಲಿಕ ಬಿಡುಗಡೆ ಕಾಯ್ದೆಯ ಪ್ರಕಾರ, ಒಬ್ಬ ಕೈದಿಗೆ ವರ್ಷದಲ್ಲಿ ಗರಿಷ್ಠ 10 ವಾರಗಳ ಕಾಲ ಪೆರೋಲ್ ನೀಡಲು ಅವಕಾಶವಿದ್ದು, ಈ ಬಿಡುಗಡೆಯೊಂದಿಗೆ ರಾಮ್ ರಹೀಮ್ ಈ ವರ್ಷದ ತನ್ನ ಗರಿಷ್ಠ ಪೆರೋಲ್ ಮಿತಿಯನ್ನು ತಲುಪಿದ್ದಾನೆ.

ಲೈಂಗಿಕ ದೌರ್ಜನ್ಯ ಪ್ರಕರಣದ ಹೊರತಾಗಿ, ಪತ್ರಕರ್ತ ರಾಮ್ ಚಂದರ್ ಛತ್ರಪತಿ ಮತ್ತು ಡೇರಾ ಮ್ಯಾನೇಜರ್ ರಂಜಿತ್ ಸಿಂಗ್ ಕೊಲೆ ಪ್ರಕರಣಗಳಲ್ಲೂ ರಾಮ್ ರಹೀಮ್‌ ಗೆ ಜೀವಾವಧಿ ಶಿಕ್ಷೆಯಾಗಿತ್ತು. ಆದರೆ, ಇತ್ತೀಚೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈ ಎರಡೂ ಕೊಲೆ ಪ್ರಕರಣಗಳಿಂದ ಆತನನ್ನು ಖುಲಾಸೆಗೊಳಿಸಿದೆ.

ಚುನಾವಣೆಗಳ ಸಂದರ್ಭದಲ್ಲಿ ಹಾಗೂ ಪದೇ ಪದೇ ರಾಮ್ ರಹೀಮ್‌ ಗೆ ಪೆರೋಲ್ ಮತ್ತು ಫರ್ಲೋ (Furlough) ನೀಡುತ್ತಿರುವುದಕ್ಕೆ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (SGPC) ಸೇರಿದಂತೆ ಹಲವು ಸಿಖ್ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಹರಿಯಾಣ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾ ಬಂದಿವೆ. ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನಗಳಲ್ಲಿ ಡೇರಾ ಸಚ್ಚಾ ಸೌದಾ ಸಂಸ್ಥೆಯು ಅಪಾರ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version