ದೇಶ್ ವಾಸಿಗಳಿಗೆ ದೀಪಾವಳಿ ಉಡುಗೊರೆ: ಈ ವಸ್ತುಗಳಿಗೆ ಇನ್ನು ಮುಂದೆ ತೆರಿಗೆ ಪಾವತಿಸಬೇಕಿಲ್ಲ!

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ದೇಶದ ಜನರಿಗೆ ದೀಪಾವಳಿ ಉಡುಗೊರೆ ಕೊಡುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಅಂತೆಯೇ ಜಿಎಸ್‌ಟಿ ಪರಿಷ್ಕರಣೆ ಮಾಡಿ ದೇಶದ ಜನರಿಗೆ ಉಡುಗೊರೆ ಘೋಷಿಸಿದ್ದಾರೆ.
ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿ ದೊಡ್ಡ ಮಟ್ಟದ ಪರಿಷ್ಕರಣೆ ಮಾಡಲಾಗಿದ್ದು, ಶೇ 12 ಮತ್ತು ಶೇ 28ರ ಸ್ಲ್ಯಾಬ್ ಗಳನ್ನು ರದ್ದು ಮಾಡಲಾಗಿದೆ. ಶೇ 5 ಮತ್ತು ಶೇ 18ರ ತೆರಿಗೆ ಸ್ಲ್ಯಾಬ್ ಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರಿಂದ ಅನೇಕ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ.
ಈ ವಸ್ತುಗಳಿಗೆ ತೆರಿಗೆ ಇಲ್ಲ:
ಯುಎಚ್ ಟಿ ಮಿಲ್ಕ್, ಪ್ಯಾಕ್ ಮಾಡಿದ ಚೆನ್ನಾ, ಪನ್ನೀರ್, ಇಂಡಿಯನ್ ಬ್ರೆಡ್ಸ್, ರೋಟಿ, ಕಾಕ್ರಾ, ಚಪಾತಿ, ಪರೋಟ, ಪಿಜ್ಜಾ ಹಾಗೂ ಬ್ರೆಡ್ ಇವುಗಳು ಈವರೆಗೆ ಶೇ 5 ರ ಜಿಎಸ್ ಟಿ ಸ್ಲ್ಯಾಬ್ ಅಡಿ ಬರುತ್ತಿದ್ದವು. ಈ ವಸ್ತುಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.
ಕಲಿಕಾ ಸಾಮಾಗ್ರಿಗಳಿಗೂ ವಿನಾಯಿತಿ:
ಆಹಾರ ವಸ್ತುಗಳು ಮಾತ್ರವಲ್ಲದೆ, ಮಕ್ಕಳ ಕಲಿಕಾಸಾಮಗ್ರಿಗಳ ಮೇಲಿನ ಜಿಎಸ್ ಟಿಯನ್ನೂ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಮ್ಯಾಪ್ಸ್, ಚಾರ್ಟ್ಸ್ ಮತ್ತು ಗ್ಲೋಬ್ಸ್, ಪೆನ್ಸಿಲ್ಸ್, ಶಾರ್ಪರ್ನರ್ಸ್, ಎರೇಸರ್, ಕ್ರಯನ್ಸ್, ಮತ್ತು ಪ್ಯಾಸ್ಟೆಲ್ ಗಳು, ಎಕ್ಸರ್‌ಸೈಸ್ ಬುಕ್ಸ್ ಮತ್ತು ನೋಟ್ ಪುಸ್ತಕಗಳು ಇವುಗಳ ಮೇಲೆ ಮೊದಲು ಶೇ.12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಇದನ್ನು ಸಂಪೂರ್ಣ ತೆರವು ಮಾಡಲಾಗಿದ್ದು, ಇನ್ಮುಂದೆ ಶೂನ್ಯ ತೆರಿಗೆ ವ್ಯಾಪ್ತಿಗೆ ಬರಲಿವೆ.
ಆರೋಗ್ಯ ವಿಮೆ:
ವೈಯಕ್ತಿಕ ವಿಮೆ ಮತ್ತು ಆರೋಗ್ಯ ವಿಮೆ ಮೇಲಿನ ಶೇ 18ರ ಜಿಎಸ್ ಟಿಯನ್ನು ಶೂನ್ಯಕ್ಕೆ ಇಳಿಕೆ ಮಾಡಲಾಗಿದೆ. ವೈಯಕ್ತಿಕ ಜೀವವಿಮೆ ಮತ್ತು ಆರೋಗ್ಯ ವಿಮೆಗೆ ಕೇಂದ್ರಸರ್ಕಾರ ಬಹುದೊಡ್ಡ ರಿಯಾಯಿತಿ ನೀಡಿದೆ.
ಮಧ್ಯಮ ವರ್ಗ, ಬಡವರನ್ನು ದೃಷ್ಟಿಯಲ್ಲಿಟ್ಟುಕೊಂಡು ಜಿಎಸ್ ಟಿ ಪರಿಷ್ಕರಣೆ ಮಾಡಲಾಗಿದೆ. ಆದರೆ, ಕೆಲ ಐಷಾರಾಮಿ ವಸ್ತುಗಳ ಮೇಲೆ ಭಾರಿ ತೆರಿಗೆ ವಿಧಿಸುವ ಮೂಲಕ ತೆರಿಗೆ ಸಂಗ್ರಹಕ್ಕೂ ಸರ್ಕಾರ ಚಿಂತನೆ ಮಾಡಿದೆ. ಈವರೆಗೆ ಶೇಕಡಾ 28ರಷ್ಟು ತೆರಿಗೆ ವ್ಯಾಪ್ತಿಯಲ್ಲಿ ಬರುತ್ತಿದ್ದ ಐಷಾರಾಮಿ ವಸ್ತುಗಳಿಗೆ ಇನ್ಮುಂದೆ ಶೇ 40 ರ ಜಿಎಸ್ ಟಿ ಪಾವತಿಸಬೇಕಾಗಲಿದೆ.
ಸಿಗರೇಟ್, ಸಿಗಾರ್, ಪಾನ್ ಮಸಾಲ, ಜರ್ದಾ, ಬೀಡಿ, ತಂಬಾಕು, ಜಗಿಯುವ ವಸ್ತುಗಳು ಇನ್ಮುಂದೆ 40 ಪರ್ಸೆಂಟ್ ಜಿಎಸ್‌ಟಿ ಅಡಿಯಲ್ಲಿ ಬರುತ್ತವೆ. ಅಧಿಕ ಸಕ್ಕರೆ ಅಂಶ ಇರುವ ಪಾನೀಯಗಳು, ಸೋಡಾ, ಕೂಲ್ ಡ್ರಿಂಕ್ಸ್, ಹಣ್ಣಿನ ಕಾರ್ಬೊನೇಟೆಡ್ ಪಾನಿಯಗಳು, ಕೆಫೀನ್ ಹೊಂದಿರುವ ಪಾನಿಯಗಳ ಮೇಲೆ ಶೇ 40ರಷ್ಟು ತೆರಿಗೆ ಬೀಳಲಿದೆ. ಪ್ಲೈಟ್, ಹೆಲಿಕಾಪ್ಟರ್, ಐಷಾರಾಮಿ ಕಾರುಗಳು, 1500 ಸಿಸಿಗಿಂತ ಹೆಚ್ಚು, 4,000 ಮಿ.ಮೀ ಉದ್ದವಿರುವ ಕಾರುಗಳು, 350 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಬೈಕ್ ಗಳ ದರಗಳು ಇನ್ನಷ್ಟು ದುಬಾರಿಯಾಗಲಿವೆ. ಖಾಸಗಿ ವಿಮಾನ, ಹೆಲಿಕಾಪ್ಟರ್ ಬಳಕೆ, ಮನರಂಜನೆಗೆ ದೋಣಿ, ಇತರ ಹಡಗುಗಳ ಬಳಕೆ, ಹೆಚ್ಚು ಸಾಮರ್ಥ್ಯದ ರಿವಾಲ್ವಾರ್, ಪಿಸ್ತೂಲ್ಗಳ ಮೇಲೆ ಶೇ 40 ರ ಸ್ಲ್ಯಾಬ್ ಇರಲಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD