ಪರಿವರ್ತನಾ ಕೋ—ಆಪರೇಟಿವ್ ಸೊಸೈಟಿಯಲ್ಲಿ ಇ–ಸ್ಟ್ಯಾಂಪ್ ಸೇವೆ ಆರಂಭ: “ಮಂಗಳೂರಿನ ಗ್ರಾಹಕರಿಗೆ ಹೆಚ್ಚಿನ ಅನುಕೂಲ”

ಮಂಗಳೂರು: ಪರಿವರ್ತನಾ ಕೋ—ಆಪರೇಟಿವ್ ಸೊಸೈಟಿ(ರಿ) ಬಜಪೆ ಇದರ ಮಂಗಳೂರು ಶಾಖೆಯ ಇ—ಸ್ಟ್ಯಾಂಪ್(E–Stamp) ಸೌಲಭ್ಯದ ಉದ್ಘಾಟನೆ ಕಾರ್ಯಕ್ರಮವು ಶನಿವಾರ ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ನಲ್ಲಿರುವ ಪಯೋನಿಯರ್ ಕಾಂಪ್ಲೆಕ್ಸ್ ನಲ್ಲಿರುವ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ವಕೀಲರಾದ ಮೋಹನ್ ದಾಸ್ ರೈ, ಸ್ಟ್ಯಾಂಪ್ ಪೇಪರ್ ಗಾಗಿ ಎಲ್ಲೆಲ್ಲಿಗೋ ಹೋಗುವ ಪರಿಸ್ಥಿತಿ ಇತ್ತು, ಅದರಲ್ಲೂ ಮಳೆಗಾಲದಲ್ಲಿ ಎಲ್ಲೆಲ್ಲಿಗೋ ಹೋಗಿ ಸ್ಟ್ಯಾಂಪ್ ಪೇಪರ್ ತರುವುದು ಕಷ್ಟಕರವಾಗಿತ್ತು. ಈಗ ನಮ್ಮ ಒತ್ತಾಯಕ್ಕೆ ಹಾಗೂ ಗ್ರಾಹಕರ ಒತ್ತಾಯಕ್ಕೆ ಇಲ್ಲೇ ಸ್ಟ್ಯಾಂಪ್ ಪೇಪರ್ ಸಿಗುವಂತೆ ಮಾಡಿ ಸಹಾಯ ಮಾಡಿದ್ದಾರೆ, ಇದು ಒಳ್ಳೆಯ ಕೆಲಸ, ಇಂದು ಮೂರು ಬ್ರ್ಯಾಂಚ್ ಇರುವಂತಹದ್ದು ನೂರು ಬ್ರ್ಯಾಂಚ್ ಆಗಲಿ, ಜನರಿಗೆ ಒಳ್ಳೆಯ ಸೇವೆ ನೀಡಲಿ ಎಂದು ಹಾರೈಸಿದರು.
ಸಾಮರಸ್ಯ ಮಂಗಳೂರು ಇದರ ಅಧ್ಯಕ್ಷರಾದ ಮಂಜುಳ ನಾಯಕ್ ಅವರು ಮಾತನಾಡಿ, ಮಂಗಳೂರಿನ ಅತೀ ಮುಖ್ಯ ಪ್ರದೇಶವಾಗಿರುವ ಸ್ಟೇಟ್ ಬ್ಯಾಂಕ್ ನಲ್ಲೇ ಸ್ಟ್ಯಾಂಪ್ ಪೇಪರ್ ಗಾಗಿ ಪರದಾಡುತ್ತಿದ್ದೆವು. ಈ ಸೇವೆಯನ್ನು ತಮಗೆ ಲಾಭವಿಲ್ಲದಿದ್ದರೂ, ಪರಿವರ್ತನಾ ಕೋ–ಆಪರೇಟಿವ್ ಸೊಸೈಟಿ ಜನರ ಸೇವೆಗಾಗಿ ತಂದಿದೆ. ಸಾಕಷ್ಟು ಜನರು ಸ್ಟ್ಯಾಂಪ್ ಪೇಪರ್ ಗಾಗಿ ಪರದಾಡುತ್ತಿದ್ದಾರೆ, ಯಾಕೆಂದರೆ ಇದು ಕೆಲವು ಕಡೆಗಳಲ್ಲಿ ಮಾತ್ರವೇ ಸಿಗುತ್ತದೆ. ಈ ಸೇವೆಯನ್ನು ತಂದಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದ ಅವರು, ಸಿಬ್ಬಂದಿ ವರ್ಗ ಎಲ್ಲರೂ ಶ್ರಮವಹಿಸಿ, ಇನ್ನಷ್ಟು ಶಾಖೆಗಳನ್ನು ತೆರೆಯುವಂತೆ ಹಾರೈಸಿದರು.
ಡಿಎಸ್ ಎಸ್ (ಪ್ರೋ . ಬಿ. ಕೃಷ್ಣಪ್ಪ ಬಣ) ಜಿಲ್ಲಾ ಸಂಚಾಲಕರಾದ ಸದಾಶಿವ ಪಡುಬಿದ್ರಿ ಮಾತನಾಡಿ, ಒಂದು ಗ್ರಾಮೀಣ ಬ್ಯಾಂಕ್ ನ್ನು ಪರಿವರ್ತನಾ ಕೊ- ಆಪರೇಟಿವ್ ಬ್ಯಾಂಕ್ ಆಗಿ ರೂಪಿಸಲು ಕೃಷ್ಣಾನಂದ ಅವರ ದೂರದರ್ಶಿತ್ವ, ಸೇವಾ ಮನೋಭಾವನೆ, ಮುಂದಾಲೋಚನೆ ಕಾರಣ, ಬಜಪೆಯಲ್ಲಿ ಆರಂಭಗೊಂಡ ತಕ್ಷಣ ಮಂಗಳೂರಿನಲ್ಲೂ ಒಂದು ಬ್ರಾಂಚ್ ತೆರೆಯುವ ಅವರ ದೂರದರ್ಶಿತ್ವವನ್ನು ಮೆಚ್ಚಬೇಕು. ಅದಲ್ಲದೇ ಇದೀಗ ಇ—ಸ್ಟ್ಯಾಂಪ್ ಕೂಡ ತಂದಿದ್ದಾರೆ. ಇನ್ನಷ್ಟು ಕಾರ್ಯಕ್ರಮಗಳು ಅವರಿಂದ ಬರಲಿಕ್ಕಿದೆ, ಈ ಬ್ಯಾಂಕ್ ಇನ್ನಷ್ಟು ಸೌಲಭ್ಯಗಳನ್ನು ಗ್ರಾಹಕರಿಗೆ ಕೊಡಲಿ ಎಂದು ಅವರು ಹಾರೈಸಿದರು.
ಪರಿವರ್ತನಾ ಕೋ—ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಕೃಷ್ಣಾನಂದ ಡಿ. ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ಸಂಸ್ಥೆಯನ್ನು ಕಟ್ಟುವುದು ಮುಖ್ಯವಲ್ಲ, ಅದನ್ನು ಮುನ್ನಡೆಸುವುದು ಮುಖ್ಯ, ಸಂಸ್ಥೆಯನ್ನು ಮುನ್ನಡೆಸುವಲ್ಲಿ ಒಂದು ಸ್ಥೈರ್ಯ ಬೇಕಾಗಿದೆ, ಆ ಸ್ಥೈರ್ಯ ಗ್ರಾಹಕರಿಂದ, ನಿರ್ದೇಶಕರಿಂದ, ನಮ್ಮ ಜೊತೆಗೆ ಯಾರೆಲ್ಲ ಸಹಕಾರ ನೀಡಿದ್ದಾರೋ ಅವರೆಲ್ಲರಿಂದ ಇದೆಲ್ಲ ಸಾಧ್ಯವಾಯ್ತು, ಸಂಸ್ಥೆಯು ಆಂತರಿಕ ಲೆಕ್ಕವನ್ನು ಮಾಡಿಸುವ ಮೂಲಕ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ಎಲ್ಲರಿಗೂ ಆರ್ಥಿಕ ಬೆನ್ನೆಲುಬಾಗಿ ನಾವು ನಿಲ್ಲಬೇಕು ಎನ್ನುವ ಉದ್ದೇಶದಿಂದ ಈ ಸಂಸ್ಥೆ ಕಟ್ಟಿದ್ದೇವೆ, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಜನ ಸಾಮಾನ್ಯರು ಲೋನ್ ಪಡೆದುಕೊಳ್ಳುವುದೆಂದರೆ, ಕಾನೂನಿನ ಅಡೆತಡೆಗಳಿಂದ ಅದು ದೂರದ ಮಾತಾಗಿದೆ, ಹತ್ತಿರ ಬಾಗಿಲಾಗಿ ನಾವು ಪರಿವರ್ತನಾ ಸೊಸೈಟಿಯನ್ನು ತಂದಿದ್ದೇವೆ. ಗ್ರಾಹರ ಬೇಡಿಕೆಯನ್ನು ಈಡೇರಿಸುವುದಕ್ಕೋಸ್ಕಾರ ನಾವು ಇ—ಸ್ಟ್ಯಾಂಪ್ ತಂದಿದ್ದೇವೆ ಎಂದು ತಿಳಿಸಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಪರಿವರ್ತನಾ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವಾತಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಆರ್ಥಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕನಸಿನೊಂದಿಗೆ ಕೃಷ್ಣಾನಂದ ಅವರು, ಸಹಕಾರ ಸಂಘ ಕಟ್ಟಲು ಹೆಜ್ಜೆ ಹಾಕಿದರು, 2020 ಸೆಪ್ಟೆಂಬರ್ ತಿಂಗಳಲ್ಲಿ ಸ್ನೇಹಿತರೊಂದಿಗೆ ಅಂಚೆ ನೌಕರರ ಸೊಸೈಟಿ, ಐಕಳ ಕಿನ್ನಿಗೋಳಿಯ ನಿರ್ದೇಶಕರಾದ ಲಾರೆನ್ಸ್ ರವರನ್ನು ಶೇರು ಸಂಗ್ರಹದ ನಿಮ್ಮಿತ್ತ ಭೇಟಿಯಾದಾಗ, ಅವರು 2006ರಲ್ಲಿ ನಾವು ಅಂಚೆ ನೌಕರರಿಗಾಗಿ ಸೊಸೈಟಿಯನ್ನು ಪ್ರಾರಂಭಿಸಿದ್ದೆವು 2016ರವರೆಗೆ ಕಾರ್ಯಾಚರಿಸಿ ಪ್ರಸ್ತುತ ಸ್ಥಗಿತವಾಗಿದೆ. ಅದನ್ನು ತಾವು ಹಸ್ತಾಂತರ ಪಡೆಯುವುದಾದರೆ ಅಥವಾ ಖರೀದಿಸುವುದಾದರೆ ನಮ್ಮ ಆಡಳಿತ ಮಂಡಳಿ ಅದಕ್ಕೆ ಸಂಪೂರ್ಣ ಸಹಕರಿಸುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಸೊಸೈಟಿ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಮತ್ತು ಆಗಲೇ ಕೆಲವು ಸೊಸೈಟಿ ರಚನೆ ಮಾಡಿದ ನಂದಿನಿ ಸೊಸೈಟಿಯ ಮು.ಕಾ. ಶಶಿಧರ್ ಶೆಟ್ಟಿಯವರು ಕೃಷ್ಣಾನಂದ ರವರಿಗೆ ಸಂಪರ್ಕಕ್ಕೆ ಸಿಗುತ್ತಾರೆ. ಇವರು ಸೊಸೈಟಿ ಪ್ರಾರಂಭಿಸುವಲ್ಲಿ ತನ್ನ ಸಹಕಾರ ನೀಡುತ್ತಾರೆ. ಮುಂದೆ ಹೊಸ ಸೊಸೈಟಿಯನ್ನು ಪ್ರಾರಂಭಿಸುವ ಯೋಜನೆಯನ್ನು ಕೈಬಿಟ್ಟು, ಸ್ಥಗಿತಗೊಂಡಿದ್ದ ಅಂಚೆ ನೌಕರರಿಗೆ ಮಾತ್ರ ಸೀಮಿತವಾಗಿದ್ದ ಸೊಸೈಟಿಯನ್ನು ಹಸ್ತಾಂತರ ಪಡೆದುಕೊಂಡು, ಸಮಾಜದ ಎಲ್ಲರಿಗೂ ಮುಕ್ತವಾಗಿ ವ್ಯವಹಾರ ನಡೆಸಲು “ಪರಿವರ್ತನಾ ಗ್ರಾಮೀಣ ಸಹಕಾರ ಸಂಘ” ಎಂದು ಹೆಸರು ಬದಲಾಯಿಸಿ, ಕೇಂದ್ರ ಕಛೇರಿಯನ್ನು ಬಜ್ಪೆಗೆ ಸ್ಥಳಾಂತರಿಸಿ, ಸಮಗ್ರ ಬೈಲಾ ತಿದ್ದುಪಡಿ ಮಾಡಿ, ಸಹಾಯಕ ಉಪನಿಬಂಧಕರು ಮಂಗಳೂರು ಇವರಿಂದ ಅನುಮೋದನೆ ಪಡೆದು, ಹಲವಾರು ಮಂದಿಯ ಶೇರು ಸಹಕಾರದಿಂದ, ಮತ್ತು ಇದರ ಎಲ್ಲಾ ಕಛೇರಿ ಓಡಾಟಕ್ಕೆ ಕರೆದ ತಕ್ಷಣ ನಿರಂತರ ಸಹಕರಿಸುತ್ತಿದ್ದ ಹರೀಶ್ವರ ರಾವ್, ಗಂಗಾಧರ ಪೂಜಾರಿ, ಕು.ಸಂಧ್ಯಾ, ವಿಲಿಯಂ ಇ ಲೋಬೋ ಇವರುಗಳ ಮತ್ತು ರವಿ .ಎಸ್. ಪಡ್ಪು, ರುಕ್ಕಯ್ಯ ಅಮೀನ್ ಕರಂಬಾರು, ರುಕ್ಮಯ ಕಟೀಲ್, ಸಿಬ್ಬಂದಿಗಳಾದ ರೀಶಾ, ಸ್ವಾತಿ ಮತ್ತಿತರರ ಸಹಕಾರದಿಂದಾಗಿ “ ಪರಿವರ್ತನಾ ಗ್ರಾಮೀಣ ಸಹಕಾರ ಸಂಘ”ವನ್ನು ಕೃಷ್ಣಾನಂದ ಅವರ ಛಲ, ಅವಿರತ ಶ್ರಮ, ತ್ಯಾಗ, ನಿರ್ದೇಶಕರುಗಳ ಸಹಕಾರದಿಂದ ಬಜಪೆಯಲ್ಲಿ ಸುಸಜ್ಜಿತವಾದ ಲಾಕರ್ ವ್ಯವಸ್ಥೆಯಿರುವ, ಕಂಪ್ಯೂಟರೀಕೃತ, ಸಿಸಿಟಿ ಅಳವಡಿಕೆಯ ಕಛೇರಿಯು 06.06.2021 ಉದ್ಘಾಟನೆಗೊಂಡು, ಇಂದು 4 ವರ್ಷ 1 ತಿಂಗಳು 27 ದಿನಗಳನ್ನು ಪೂರೈಸುತ್ತಾ ಸಂಸ್ಥೆಯು ಲಾಭದಾಯಕವಾಗಿ ವ್ಯವಹಾರವನ್ನು ನಡೆಸುತ್ತಿದೆ. ಮಂಗಳೂರು ಸುತ್ತಮುತ್ತ ಗ್ರಾಹಕರನ್ನು ಹೊಂದಿದ್ದ ನಮ್ಮ ಸೊಸೈಟಿಯು ಮಂಗಳೂರಿನಲ್ಲಿ ಶಾಖಾ ಕಛೇರಿ ತೆರೆದು ಜಿಲ್ಲಾಮಟ್ಟದಲ್ಲಿ ವ್ಯಾಪಾರವನ್ನು ವಿಸ್ತರಿಸುವ ದೃಷ್ಟಿಯಿಂದ ಸಮಗ್ರ ಬೈಲಾ ತಿದ್ದುಪಡಿ ಮಾಡಿ, ಸಂಸ್ಥೆಯ ಹೆಸರನ್ನು ಪರಿವರ್ತನಾ ಕೋ ಅಪರೇಟಿವ್ ಸೊಸೈಟಿಯನ್ನಾಗಿ ಪರಿವರ್ತನೆಗೊಳಿಸಿ, ಮಂಗಳೂರು ಶಾಖೆ ದಿನಾಂಕ 02.12.2024 ರಂದು ಉದ್ಘಾಟನೆಗೊಂಡು 7 ತಿಂಗಳು 30 ದಿನಗಳನ್ನು ಪೂರೈಸುತ್ತಿದೆ. ಪ್ರಸ್ತುತ ಈ ಸ್ಟಾಂಪ್ ಸೌಲಭ್ಯವನ್ನೂ ಗ್ರಾಹರಿಗಾಗಿ ಉದ್ಘಾಟಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕಟೀಲು ವಿವಿದ್ದೋದ್ದೇಶ ಸಹಕಾರಿ ಸಂಘದ ಸಿಇಓ ಉಷಾ, ಪರಿವರ್ತನಾ ಕೋ ಅಪರೇಟಿವ್ ಸೊಸೈಟಿ (ಲಿ.) ಮಾಜಿ ಅಧ್ಯಕ್ಷರಾದ ವಿಲಿಯಂ ಲೋಬೋ, ವಕೀಲರಾದ ಸರ್ಫರಾಝ್, ನೋಟರಿ ವಕೀಲರಾದ ಇಸ್ಮಾಯಿಲ್, ಭೂ ಮಾಪನ ದಾಖಲೆಗಳ ಸೇವಾ ಕೇಂದ್ರದ ಮಾಲಕರಾದ ಜಯಕುಮಾರ್ ಭಾಗವಹಿಸಿ, ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD