12:04 PM Wednesday 17 - December 2025

ಪೊಲೀಸರು ಲಂಚ ಕೇಳಿದ ಆರೋಪ: ಹೋಟೆಲ್ ಬಾಲ್ಕನಿಯಿಂದ ಜಿಗಿದ ಯುವತಿ ಪ್ರಕರಣಕ್ಕೆ ‘ಟ್ವಿಸ್ಟ್’!

unauthorised hotel
17/12/2025

ಬೆಂಗಳೂರು: ಬೆಂಗಳೂರಿನ ಕುಂದಲಹಳ್ಳಿಯ ಸೀ ಎಸ್ಟಾ ಹೋಟೆಲ್‌ ನಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ಪೊಲೀಸರು ಹಣಕ್ಕೆ ಬೇಡಿಕೆ ಇಟ್ಟಿದ್ದಕ್ಕಾಗಿ ಭಯಗೊಂಡ ಯುವತಿ ವೈಷ್ಣವಿ (21) ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಜಿಗಿದು ಗಾಯಗೊಂಡ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ.

ಯುವತಿ ಮತ್ತು ಆಕೆಯ ಸ್ನೇಹಿತರಿಂದ ಹೊಯ್ಸಳ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಪರಶುರಾಮ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ್ದಾರೆ. ಪಾರ್ಟಿಯಲ್ಲಿದ್ದ ಯುವಕ-ಯುವತಿಯರು, ಹೋಟೆಲ್ ಸಿಬ್ಬಂದಿ ಹಾಗೂ ಹೊಯ್ಸಳ ಸಿಬ್ಬಂದಿಯ ವಿಚಾರಣೆ ನಡೆಸಲಾಗಿದೆ.

ನಿರಾಧಾರವಾದ ಲಂಚದ ಆರೋಪ:

ತನಿಖೆಯ ಭಾಗವಾಗಿ, ಹೊಯ್ಸಳ ಸಿಬ್ಬಂದಿ ಧರಿಸಿದ್ದ ಬಾಡಿವೋರ್ನ್ ಕ್ಯಾಮೆರಾದ (Body-Worn Camera) ವಿಡಿಯೋ ಪರಿಶೀಲಿಸಿದಾಗ, ಪೊಲೀಸರು ಹಣ ಕೇಳಿದ್ದಕ್ಕೆ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ. ಕೇವಲ ಜೋರಾದ ಸಂಗೀತದ ಬಗ್ಗೆ ದೂರು ಬಂದಿದ್ದ ಕಾರಣಕ್ಕೆ ರೂಮ್‌ಗೆ ತೆರಳಿ, ಅಲ್ಲಿನ ಯುವಕ-ಯುವತಿಯರ ವೈಯಕ್ತಿಕ ಮಾಹಿತಿ ಪಡೆದು ಬುದ್ಧಿ ಹೇಳಿರುವ ದೃಶ್ಯ ಮಾತ್ರ ದಾಖಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅಕ್ಕಪಕ್ಕದ ರೂಮ್‌ನವರಿಗೆ ತೊಂದರೆಯಾಗಿದ್ದರಿಂದ ಬಂದ ದೂರಿನ ಮೇರೆಗೆ ಮುಂಜಾನೆ 5:50ರ ಸುಮಾರಿಗೆ ಪೊಲೀಸರು ಹೋಟೆಲ್‌ಗೆ ಹೋಗಿರುವುದು ತನಿಖೆಯಿಂದ ದೃಢಪಟ್ಟಿದೆ.

ಪೊಲೀಸರ ವಿಚಾರಣೆಯ ಮಧ್ಯೆ, ಭಯಗೊಂಡ ವೈಷ್ಣವಿ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಹಾರಿದ್ದಾಳೆ. ಆಕೆ ಕಬ್ಬಿಣದ ಗ್ರಿಲ್‌ಗೆ ತಾಗಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಹೋಟೆಲ್ ಮಾಲೀಕರ ವಿರುದ್ಧ ಎಫ್‌ ಐಆರ್:

ಘಟನೆ ಸಂಬಂಧ ವೈಷ್ಣವಿ ತಂದೆ ನೀಡಿದ ದೂರಿನ ಮೇರೆಗೆ, ಹೋಟೆಲ್ ಮಾಲೀಕರು ಕಟ್ಟಡದ ಬಾಲ್ಕನಿಯಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಎಫ್‌ ಐಆರ್ ದಾಖಲಿಸಲಾಗಿದೆ. ಅಲ್ಲದೆ, ಹೋಟೆಲ್ ಜಿಬಿಎ (ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಯಿಂದ ಅನುಮತಿ ಪಡೆದಿಲ್ಲ ಎಂಬುದು ತಿಳಿದುಬಂದಿದ್ದು, ಹೋಟೆಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಬಿಎಗೆ ತಿಳಿಸಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version