ಟೊಮೆಟೊ ಬಿಡಿಸಲು ಹೋಗಿದ್ದ ರೈತ ಹುಲಿ ದಾಳಿಗೆ ಬಲಿ!

rajashekhara
27/10/2025

ಮೈಸೂರು: ಹುಲಿ ದಾಳಿಗೆ ರೈತನೋರ್ವ ಬಲಿಯಾಗಿರುವ ಘಟನೆ ನಂಜನಗೂಡು ತಾಲೂಕಿನ ಹೆಡಿಯಾಲ ಹೋಬಳಿಯ ಮುಳ್ಳೂರುಹುಂಡಿ–ಬೆಣ್ಣೆಗೆರೆ ಗ್ರಾಮದ ಜಮೀನಿನಲ್ಲಿ ನಡೆದಿದೆ.

ಬೆಣ್ಣೆಗೆರೆ ಗ್ರಾಮದ ರಾಜಶೇಖರ್ (55) ಹುಲಿ ದಾಳಿಗೆ ಬಲಿಯಾದ ರೈತ. ರಾಜಶೇಖರ್ ಹಾಗೂ ಸಿದ್ದರಾಮೇಗೌಡ (50) ಇವರಿಬ್ಬರು, ಬೆಣ್ಣೆಗೆರೆ ಗ್ರಾಮದ ಬೇರೆಯವರ ಜಮೀನಿನಲ್ಲಿ ಟೊಮೆಟೊ ಬಿಡಿಸಲು ಹೋಗಿದ್ದರು.  ಟೊಮೆಟೊ ಬಿಡಿಸಿ ನಂತರ ಊಟಕ್ಕೆ ಮನೆಗೆ ಹೋಗುತ್ತಿದ್ದರು ಈ ವೇಳೆ ಏಕಾಏಕಿ ಇಬ್ಬರ ಮೇಲೆ ಹುಲಿ ದಾಳಿ ನಡೆಸಿದೆ.

ಸಿದ್ದರಾಮೇಗೌಡ ಹುಲಿಯನ್ನು ಕಂಡು ಕಿರುಚಾಡಿ ಓಡಿ ಹೋಗಿದ್ದು, ರಾಜಶೇಖರ್ ಮೇಲೆ ಹುಲಿ ದಾಳಿ ನಡೆಸಿದ್ದು, ಅವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಶಾಸಕ ಅನಿಲ್ ಚಿಕ್ಕಮಾದು ಸ್ಥಳಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಸರ್ಕಾರದಿಂದ ಪರಿಹಾರವನ್ನು ಕೊಡಿಸುವುದಾಗಿ ಭರವಸೆ ನೀಡಿ ತೆರಳಿದರು.  ಆದರೆ, ಘಟನೆ ನಡೆದು ಎರಡು ಗಂಟೆ ಕಳೆದರೂ ಅರಣ್ಯ ಇಲಾಖೆಯ ಯಾವೊಬ್ಬ ಸಿಬ್ಬಂದಿ ಸ್ಥಳಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಹುಲಿ ದಾಳಿಯಿಂದ ಮೃತಪಟ್ಟ ರೈತ ರಾಜಶೇಖರ್ ಕುಟುಂಬಕ್ಕೆ ರಾಜ್ಯ ಸರ್ಕಾರ 50 ಲಕ್ಷ ರೂ. ಪರಿಹಾರ ಹಾಗೂ ಆ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಖಾಯಂ ಉದ್ಯೋಗ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version