ಮಗಳ ಚಿಕಿತ್ಸೆಗಾಗಿ ಕಿಡ್ನಿ ಮಾರಲು ಮುಂದಾಗಿದ್ದ ತಂದೆ: ನೊಂದ ಕುಟುಂಬದ ನೆರವಿಗೆ ಧಾವಿಸಿದ ಶಾಸಕ ಸುರೇಶ್ ಕುಮಾರ್
ಬೆಂಗಳೂರು: ಮಗಳ ಪ್ರಾಣ ಉಳಿಸಲು ಹಣವಿಲ್ಲದೆ ನೊಂದ ತಂದೆಯೊಬ್ಬರು ತನ್ನ ಕಿಡ್ನಿ ಮಾರಾಟ ಮಾಡಲು ಮುಂದಾದ ಕರುಣಾಜನಕ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಮಾಜಿ ಸಚಿವ ಹಾಗೂ ಶಾಸಕ ಎಸ್. ಸುರೇಶ್ ಕುಮಾರ್ ಅವರು ತಕ್ಷಣ ಸ್ಪಂದಿಸಿ ಕುಟುಂಬಕ್ಕೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಾಲು ಕಳೆದುಕೊಂಡಿದ್ದರೂ ಛಲ ಬಿಡದೆ ಪರೀಕ್ಷೆ ಬರೆದಿದ್ದ ಕುಸುಮಾ ಎಂಬ ಯುವತಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ವೈಟ್‌ಫೀಲ್ಡ್‌ನ ಎಸ್ಟರ್ ಆಸ್ಪತ್ರೆಗೆ ದಾಖಲಾಗಿದ್ದರು. ಕೇವಲ ನಾಲ್ಕು ದಿನಗಳ ಚಿಕಿತ್ಸೆಗೇ ಸುಮಾರು 5.5 ಲಕ್ಷ ರೂಪಾಯಿ ವೆಚ್ಚವಾಗಿತ್ತು. ಬಡ ಕುಟುಂಬದವರಾದ ಕುಸುಮಾ ಅವರ ತಂದೆಗೆ ಈ ಬೃಹತ್ ಮೊತ್ತವನ್ನು ಭರಿಸಲು ಸಾಧ್ಯವಾಗದೆ, ಮಗಳ ಚಿಕಿತ್ಸೆಗಾಗಿ ತಮ್ಮ ಕಿಡ್ನಿ ಮಾರಾಟ ಮಾಡುವುದಾಗಿ ಘೋಷಿಸಿದ್ದರು.
ಈ ವಿಷಯ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮೂಲಕ ತಿಳಿಯುತ್ತಿದ್ದಂತೆಯೇ ಶಾಸಕ ಸುರೇಶ್ ಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಅಲ್ಲದೆ, ಆಸ್ಪತ್ರೆ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದರು. ಈ ವಿಚಾರವನ್ನು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅವರ ಗಮನಕ್ಕೆ ತಂದರು.
ಶಾಸಕರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳ ಕಚೇರಿಯು ‘ಮುಖ್ಯಮಂತ್ರಿ ಪರಿಹಾರ ನಿಧಿ’ಯಿಂದ ಚಿಕಿತ್ಸಾ ವೆಚ್ಚ ಭರಿಸಲು ಒಪ್ಪಿಗೆ ನೀಡಿತು. ಈ ನಡುವೆ ಶಾಸಕರ ಮಧ್ಯಸ್ಥಿಕೆ ಮತ್ತು ಕುಟುಂಬದ ಪರಿಸ್ಥಿತಿಯನ್ನು ಅರಿತ ಎಸ್ಟರ್ ಆಸ್ಪತ್ರೆ ಆಡಳಿತ ಮಂಡಳಿಯು ಉದಾರತೆ ತೋರಿ, ಚಿಕಿತ್ಸಾ ವೆಚ್ಚವನ್ನು ಪಡೆಯದಿರಲು ನಿರ್ಧರಿಸಿದೆ. ಕುಸುಮಾ ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡುವುದಾಗಿ ಆಸ್ಪತ್ರೆ ಭರವಸೆ ನೀಡಿದೆ.
ಸಕಾಲದಲ್ಲಿ ನೆರವಾದ ಶಾಸಕರಿಗೆ ಮತ್ತು ಉಚಿತ ಚಿಕಿತ್ಸೆ ನೀಡಲು ಮುಂದೆ ಬಂದ ಆಸ್ಪತ್ರೆಗೆ ಸಂತ್ರಸ್ತ ಕುಟುಂಬ ಹಾಗೂ ಸಾರ್ವಜನಿಕರು ಧನ್ಯವಾದ ಸಲ್ಲಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























