ಸೌಜನ್ಯ ಪ್ರತಿಭಟನೆಯಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಘೋಷಣೆ ಕೂಗಿದ ಮಹಿಳೆಯರ ಗುಂಪು: ಗೊಂದಲದ ವಾತಾವರಣ ಸೃಷ್ಟಿ

udupi
29/08/2023

ಉಡುಪಿ: ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರು ತನಿಖೆ ಮಾಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಸೌಜನ್ಯ ಹೋರಾಟ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಅಜ್ಜರಕಾಡು ಸೈನಿಕರ ಹುತಾತ್ಮ ಸ್ಮಾರಕ ಬಳಿ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಮಹಿಳೆಯರ ಗುಂಪೊಂದು ಘೋಷಣೆಗಳನ್ನು ಕೂಗಿದ್ದು, ಈ ಹಿನ್ನೆಲೆಯಲ್ಲಿ ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಮಹಿಳೆಯರಿಗೆ ದಿಗ್ಬಂಧನ ವಿಧಿಸಿ ಮುಂಜಾಗ್ರತಾ ಕ್ರಮ ವಹಿಸಿದರು.

ಪ್ರತಿಭಟನಾ ಸಭೆ ಆರಂಭಕ್ಕೆ ಮೊದಲೇ ನೂರಾರು ಮಹಿಳೆಯರ ಗುಂಪು ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಜಮಾಯಿಸಿತು. ಈ ಗುಂಪು ಪ್ರತಿಭಟನೆಗೆ ವಿರುದ್ಧವಾಗಿರುವುದನ್ನು ಅರಿತ ಪೊಲೀಸರು ಕೂಡಲೇ ಮಹಿಳೆ ಯರನ್ನು ಅಲ್ಲಿಂದ ಹೊರಗಡೆ ಕಳುಹಿಸಿದರು. ಆದರೆ ಹೊರ ಹೋಗಲು ಒಪ್ಪದ ಮಹಿಳೆಯರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು. ಈ ವೇಳೆ ಮಹಿಳೆಯರ ಗುಂಪು ಧರ್ಮಸ್ಥಳ ಕ್ಷೇತ್ರದ ಪರ ಘೋಷಣೆಗಳನ್ನು ಕೂಗಿ ನಮಗೂ ಪ್ರತಿಭಟನೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿತು. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣ ವಾಯಿತು.

ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮಹಿಳೆಯರ ಗುಂಪನ್ನು ಅಜ್ಜರಕಾಡು ಪುರಭವನದ ಎದುರು ಪ್ರತಿಭಟನೆ ಮುಗಿಯುವವರೆಗೆ ದಿಗ್ಭಂಧನ ದಲ್ಲಿರಿಸಿತು. ಈ ಹಿನ್ನೆಲೆಯಲ್ಲಿ ಸುಮಾರು ನಾಲ್ಕು ತಾಸು ಅಜ್ಜರಕಾಡು ರಸ್ತೆ ಸಂಚಾರವನ್ನೇ ಸ್ಥಗಿತಗೊಳಿಸಲಾಗಿತ್ತು. ಎಸ್ಪಿ ಅಕ್ಷಯ್ ಹಾಕೇ ನೇತೃತ್ವದಲ್ಲಿ ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ಧಲಿಂಗಪ್ಪ, ಡಿವೈಎಸ್ಪಿಗಳಾದ ದಿನಕರ, ಬೆಳ್ಳಿಯಪ್ಪ ಸ್ಥಳದಲ್ಲಿ ಬೀಡುಬಿಟ್ಟು ಬಿಗಿ ಭದ್ರತೆ ಒದಗಿಸಿದ್ದರು

ಇತ್ತೀಚಿನ ಸುದ್ದಿ

Exit mobile version