4:49 PM Saturday 18 - October 2025

ಗುಂಡಿಯಲ್ಲಿಟ್ಟಿದ್ದ ಮಗುವಿನ ಶವ ಹೊರ ತೆಗೆಸಿದರು | ಅಯ್ಯಯ್ಯೋ… ಇದೂ ಧರ್ಮವೇ?

tumakuru dalith
22/03/2021

ಕೊರಟಗೆರೆ: ಶವಸಂಸ್ಕಾರಕ್ಕಾಗಿ ಗುಂಡಿಯಲ್ಲಿಟ್ಟಿದ್ದ ಪುಟ್ಟ ಮಗುವಿನ ಮೃತದೇಹವನ್ನು ಗುಂಡಿಯಿಂದ ಬಲವಂತವಾಗಿ ತೆಗೆಸಿ, ದಲಿತ ಕುಟುಂಬವೊಂದನ್ನು ತೀವ್ರವಾಗಿ ಮಾನಸಿಕವಾಗಿ ಹಿಂಸಿಸಿದ ಘಟನೆ ತುಮಕೂರಿನ ಕೊರಟಗೆರೆ ತಾಲೂಕಿನ ಜಂಪೇನಹಳ್ಳಿ ಸ್ಮಶಾನದಲ್ಲಿ ನಡೆದಿದೆ.

ಎತ್ತಿನಹೊಳೆ ಪೈಪ್ ಲೈನ್ ಕಾಮಗಾರಿಗಾಗಿ ಕಲ್ಲು ಬಂಡೆ ಸಿಡಿಸಿದ್ದು, ಈ ಭಯಾನಕ ಶಬ್ಧದಿಂದ ಬೆಚ್ಚಿಬಿದ್ದು ಪುಟ್ಟ ಕಂದ ಸಾವನ್ನಪ್ಪಿತ್ತು. ಬಾಳಿ ಬದುಕಬೇಕಿದ್ದ ಮಗು ಪ್ರಪಂಚ ಅರಿಯುವ ಮೊದಲೇ ಕಣ್ಣು ಮುಚ್ಚಿತಲ್ಲ ಎಂಬ ನೋವಿನಲ್ಲಿ ಕೊರಗಿದ್ದ ಕುಟುಂಬಸ್ಥರು ಸಮೀಪದ ಸ್ಮಶಾನಕ್ಕೆ ಶವ ಸಂಸ್ಕಾರಕ್ಕೆ ತೆರಳಿದ್ದು, ಈ ವೇಳೆ ಸ್ಮಶಾನದ ಪಕ್ಕದಲ್ಲಿರುವ ಜಮೀನಿನ ಕಾವಲುಗಾರ ಶವಸಂಸ್ಕಾರಕ್ಕೆ ಅಡ್ಡಿಪಡಿಸಿದ್ದು, ಮಗುವಿನ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಬೇಡಿ ಎಂದು ಎಷ್ಟೇ ಬಾರಿ ಬೇಡಿಕೊಂಡರು ಕೂಡ ಆತ ಮನುವಾದಿಯಂತೆ ವರ್ತಿಸಿದ್ದಾನೆ.

ಧಾರ್ಮಿಕ ವಿಧಿವಿಧಾನ ಮುಗಿಸಿದ ಬಳಿಕ ಶವಸಂಸ್ಕಾರಕ್ಕೆ ಅಡ್ಡಿಪಡಿಸಲಾಗಿದೆ. ಸಮಾಧಿ ಮಾಡಲು ಕೆಲವೇ ಕ್ಷಣಗಳಲ್ಲಿ ಅಲ್ಲಿಗೆ ಬಂದಿದ್ದ ವ್ಯಕ್ತಿ. ಇದು ಗಾರ್ಮೆಂಟ್ಸ್ ಕಂಪೆನಿಗೆ ಸೇರಿದ ಜಾಗ ಎಂದು ಆಧಾರ ರಹಿತವಾಗಿ ವಾದಿಸಿದ್ದು, ಇಲ್ಲಿ ಶವಸಂಸ್ಕಾರ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ. ಕೊನೆಗೆ ವಿಧಿವಿಧಾನಗಳನ್ನು ಮುಗಿಸಿದ ಬಳಿಕ ಮಗುವಿನ ಮೃತದೇಹವನ್ನು ಪಕ್ಕದ ರಾಜಕಾಲುವೆಯಲ್ಲಿ  ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮನುಷ್ಯ ಜಾತಿಯಲ್ಲಿ ಹುಟ್ಟಿದವರು ಮಾಡಬಾರದ ಅಕ್ರಮ ಅನ್ಯಾಯ ಇದಾಗಿದೆ. ಇಂತಹ ದುಷ್ಟು ವ್ಯವಸ್ಥೆ ಯಾವುದೇ ಧರ್ಮದಲ್ಲಿರಲು ಸಾಧ್ಯವಿಲ್ಲ. ಇಷ್ಟೆಲ್ಲ ನಡೆದಿದ್ದರೂ, ಈ ಕುಟುಂಬದ ಪರವಾಗಿ ಸ್ಥಳೀಯರು ಬಿಟ್ಟರೆ ಬೇರೆ ಯಾರು ಕೂಡ ಧ್ವನಿಯೆತ್ತಿಲ್ಲ. ಇಂತಹ ನೀಚ ಕೃತ್ಯಗಳ ಅಂತ್ಯಕ್ಕೆ ದಲಿತ ಸಂಘಟನೆಗಳು ಎಚ್ಚೆತ್ತುಕೊಳ್ಳಬೇಕು. ಪಕ್ಷ ಬೇಧ ಮರೆತು ಮನುವಾದಿಗಳ ಹುಟ್ಟಡಗಿಸಬೇಕು ಎಂಬ ಆಕ್ರೋಶದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ.

 

ಇತ್ತೀಚಿನ ಸುದ್ದಿ

Exit mobile version