ಮೋದಿ ಕೊಟ್ಟ ಭರವಸೆಯಲ್ಲಿ ಒಂದೇ ಒಂದನ್ನಾದ್ರೂ ಈಡೇರಿಸಿದ್ದಾರಾ?: ಸಿಎಂ ಸಿದ್ದರಾಮಯ್ಯ

c.m siddaramaya
02/04/2024

ತಿ.ನರಸೀಪುರ: ದೇಶದ ಜನ ಈ ಬಾರಿ ನರೇಂದ್ರ ಮೋದಿಯವರ ಮಾತು ಮತ್ತು ಕೆಲಸ ಎರಡನ್ನೂ ತುಲನೆ ಮಾಡಿ ಮತ ಹಾಕ್ತಾರೆ. ಹೀಗಾಗಿ ಅವರಿಗೆ 200 ಸೀಟು ದಾಟುವುದೇ ಕಷ್ಟ ಎನ್ನುವ ವಾಸ್ತವದ ಮನವರಿಕೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿನ ನರಸೀಪುರ ವಿಧಾನಸಭಾ ಕ್ಷೇತ್ರದ ತಿ.ನರಸೀಪುರದಲ್ಲಿ ನಡೆದ ಸುನಿಲ್ ಬೋಸ್ ಪರ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಸಿ.ಎಂ ಮಾತನಾಡಿದರು.

ನರೇಂದ್ರ ಮೋದಿಯವರು‌ ಪ್ರಧಾನಿಯಾಗಿ 10 ವರ್ಷ ಆಯ್ತು. ಅವರು ಕೊಟ್ಟ ಭರವಸೆಯಲ್ಲಿ ಒಂದೇ ಒಂದನ್ನಾದ್ರೂ ಈಡೇರಿಸಿದ್ದಾರಾ ಹೇಳಿ. ಹೀಗಾಗಿ ದೇಶದ ಜನ ಈ ಬಾರಿ ನರೇಂದ್ರ ಮೋದಿಯವರ ಮಾತು ಮತ್ತು ಕೆಲಸ ಎರಡನ್ನೂ ತುಲನೆ ಮಾಡಿ ಮತ ಹಾಕ್ತಾರೆ. ಮೋದಿ ಬರೀ ಮಾತಲ್ಲಿ ಮನೆ ಕಟ್ಟಿದ್ದು ಸಾಕು ಎಂದು ದೇಶದ ಜನ ತೀರ್ಮಾನಿಸಿದ್ದಾರೆ ಎಂದರು.

ದೇಶದಲ್ಲಿರುವ ಕಪ್ಪು ಹಣವನ್ನೆಲ್ಲಾ ಕರಗಿಸ್ತೀನಿ ಎಂದು ಹೇಳಿ ಡಿಮಾನೆಟೈಸೇಷನ್ ಮಾಡಿದರು. ಆದರೆ ಇದರಿಂದ ಕಪ್ಪು ಹಣ ಕರಗಲಿಲ್ಲ. ಇದರಿಂದ ಲಾಭ ಆಗಿದ್ದು ಅಂಬಾನಿ-ಅದಾನಿಗೆ ಮಾತ್ರ. ನೋಟು ನಿಷೇಧಕ್ಕೂ ಮೊದಲು ಇವರ ಬಳಿ ಇದ್ದ ಆಸ್ತಿ, ನೋಟು ನಿಷೇಧದ ಬಳಿಕ ಅವರ ಆಸ್ತಿಯಲ್ಲಿ ಆದ ಏರಿಕೆಯನ್ನು ನೀವೇ ತುಲನೆ ಮಾಡಿ ಸರಿಯಾಗಿ ಅರ್ಥ ಮಾಡಿಕೊಳ್ಳಿ ಎಂದು ಕರೆ ನೀಡಿದರು.

ವಿದೇಶದಲ್ಲಿರುವ ಕಪ್ಪುಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕ್ತೀವಿ ಅಂದ್ರು, ಹಾಕಿದ್ರಾ ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ್ರು, ಇವರ ಮಾತನ್ನು ನಂಬಿದ ದೇಶದ ಯುವಕ ಯುವತಿಯರು ಎಲ್ಲಿ ಉದ್ಯೋಗ ಎಂದರೆ ಪಕೋಡಾ ಮಾರಾಟ ಮಾಡಿ ಎಂದರು.

ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅಂದ್ರು. ಆಯ್ತಾ ಯಾರದ್ದಾದರೂ ವಿಕಾಸ? ಅಚ್ಛೆ ದಿನ್ ಆಯೆಗಾ ಅಂದರು, ನಿಮ್ಮಲ್ಲಿ ಯಾರ ಬದುಕಲ್ಲಾದರೂ ಅಚ್ಚೆ ದಿನ್ ಬಂತಾ ಎಂದು ಪ್ರಶ್ನಿಸಿದರು.

ಭಾರತೀಯರನ್ನು ಕೇವಲ ಭಾವನಾತ್ಮಕವಾಗಿ ಕೆರಳಿಸಿ ಅವರ ಬದುಕನ್ನು ಹಾಳು ಮಾಡಿದ ಸುಳ್ಳುಕೋರರಿಗೆ ದೇಶದ ಪ್ರಜ್ಞಾವಂತ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದರು.

ಕ್ಷೇತ್ರದ ಶಾಸಕರೂ ಸಮಾಜ ಕಲ್ಯಾಣ ಸಚಿವರೂ ಆದ ಹೆಚ್.ಸಿ‌.ಮಹದೇವಪ್ಪ, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕರಾದ ಅನಿಲ್ ಚಿಕ್ಕಮಾದು, ದರ್ಶನ್ ದ್ರುವನಾರಾಯಣ್ ಸೇರಿ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಶಾಸಕರುಗಳು ಉಪಸ್ಥಿತರಿದ್ದರು.

ಆಶ್ರಯ ಸಮಿತಿ ಅಧ್ಯಕ್ಷರಾದ ಯತೀಂದ್ರ ಸಿದ್ದರಾಮಯ್ಯ, ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುನಿಲ್ ಬೋಸ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಪುಷ್ಪ ಅಮರನಾಥ್ ಸೇರಿ ವರುಣಾ ವಿಧಾನಸಭಾ ಕ್ಷೇತ್ರದ ಮುಖಂಡರು , ಬ್ಲಾಕ್ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸ್ಥಳೀಯ ನಾಯಕರುಗಳು ಸಭೆಯಲ್ಲಿ ಉಪಸ್ಥಿತರಿದ್ದು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಶಪಥ ಮಾಡಿದರು.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version