ವಿಚಿತ್ರ ಚರ್ಮರೋಗದಿಂದ ಬಳಲುತ್ತಿರುವ ಮಕ್ಕಳನ್ನು ಭೇಟಿಯಾದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

gundurav 1
22/09/2023

ಚಾಮರಾಜನಗರ: ವಿಚಿತ್ರ ಹಾಗೂ ಮಾರಣಾಂತಿಕ ರೋಗದಿಂದ ಬಳಲುತ್ತಿರುವ ಹನೂರು ತಾಲೂಕಿನ ಭದ್ರಯ್ಯನಹಳ್ಳಿ ಹಾಗೂ ಕುರಟ್ಟಿ ಹೊಸೂರು ಗ್ರಾಮಗಳಿಗೆ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಮಕ್ಕಳ ಕ್ಷೇಮ‌ ವಿಚಾರಿಸಿದರು.

ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದ ಸವಿತಾ ಹಾಗೂ ಭದ್ರಯ್ಯನಹಳ್ಳಿ ಗ್ರಾಮದ ದೀಕ್ಷಿತಾ ಮನೆಗಳಿಗೆ ದಿನೇಶ್ ಗುಂಡೂರಾವ್ ಭೇಟಿ ನೀಡಿ ಸರ್ಕಾರದಿಂದ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಚುಕ್ಕಿ ಚರ್ಮ ರೋಗ ಅನುವಂಶಿಯವಾಗಿ ಬರುವ ಖಾಯಿಲೆಯಾಗಿದ್ದು 10-14 ವಯೋಮಾನ ದಾಟಿದ ಬಳಿಕ ಈ ವಿಚಿತ್ರ ರೋಗ ಕಾಲಿಡಲಿದೆ. ಬಿಸಿಲಿಗೆ ಹೋಗಲಾಗದ ಪರಿಸ್ಥಿತಿ ಇರಲಿದೆ, ಇದೊಂದು ಮಾರಣಾಂತಿಕವಾಗಿದ್ದು 14 ಮಂದಿ ಮಕ್ಕಳಲ್ಲಿ ಕಾಣಿಸಿಕೊಂಡು 8 ಮಂದಿ ಅಸುನೀಗಿದ್ದಾರೆ 6 ಮಂದಿ ಖಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

ಕುರಟ್ಟಿ ಹೊಸೂರು ಗ್ರಾಮದಲ್ಲಿ ಸವಿತಾ, ನವೀನ್ ಶೆಟ್ಟಹಳ್ಳಿ ಗ್ರಾಮದಲ್ಲಿ ಹಶಿಕಾ ಭದ್ರಯ್ಯನಹಳ್ಳಿಯಲ್ಲಿ ದೀಕ್ಷಿತಾ, ನಾಗಾರ್ಜುನ್ ಎಂಬವರು ಚುಕ್ಕಿ ಚರ್ಮರೋಗದಿಂದ ಬಳಲುತ್ತಿದ್ದು ರಾಜ್ಯದ ಬೇರೆ ಬೇರೆ ಭಾಗದಲ್ಲೂ ಇತ್ತೀಚೆಗೆ ಈ ಖಾಯಿಲೆ ವರದಿಯಾಗುತ್ತಿದ್ದು ರೋಗಕ್ಕೆ ತುತ್ತಾದವರು ಅಂಧರಾಗಿ ಬಳಿಕ ಜೀವವನ್ನೇ ಬಿಟ್ಟಿದ್ದಾರೆ ಎಂದು ಹೇಳಿದರು.

ಸಹಾನುಭೂತಿ ನೆಲೆಯಲ್ಲಿ ಕುಟುಂಬಕ್ಕೆ ಪರಿಹಾರ ಕೊಡಿಸಲು ಪ್ರಯತ್ನ ಮಾಡಲಿದ್ದು ಔಷದಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಸರ್ಕಾರವೇ ಭರಿಸಲಿದೆ. ಈ ಜೆನೆಟಿಕ್ ಖಾಯಿಲೆ ಬೆಳಕಿಗೆ ಬಂದ ಬಳಿಕ ಅಂತಾರಾಷ್ಟ್ರೀಯ ಮಟ್ಟದ ವೈದ್ಯರು ಕೂಡ ಈ ಖಾಯಿಲೆ ಬಗ್ಗೆ ಕೇಳುತ್ತಿದ್ದಾರೆ. ಇದನ್ನು ಸಂಪೂರ್ಣ ಗುಣಮುಖ ಮಾಡಲು ಸಾಧ್ಯವಿಲ್ಲ ಆದರೆ ಇದನ್ನು ಬರದಂತೆ ತಡೆಯಬಹುದಾಗಿದೆ, ಈ ರೋಗದ ಬಗ್ಗೆ ತಜ್ಞ ವೈದ್ಯರ ಜೊತೆ ಈ ಬಗ್ಗೆ ಸಮಾಲೋಚನೆ ನಡೆಸುತ್ತೇನೆ ಎಂದರು.

ಇತ್ತೀಚಿನ ಸುದ್ದಿ

Exit mobile version