ಅಯೋಧ್ಯೆ ರಾಮಮಂದಿರಕ್ಕೆ ದಲಿತರು ಕೊಟ್ಟ ದೇಣಿಗೆ “ಅಶುದ್ಧ” ಎಂದು ವಾಪಸ್ ಕೊಟ್ಟ ಹಿಂದೂಗಳು!

ram mandir
21/01/2024

ಜಲಾವರ್:  ಅಯೋಧ್ಯೆ ರಾಮಮಂದಿರದ ಮೆರವಣಿಗೆಗಳು, ಕಲಶ ಯಾತ್ರೆಗಳು ಮತ್ತು ಪ್ರಸಾದ ವಿತರಣೆಗಾಗಿ ಸವರ್ಣಿಯರು ದೇಣಿಗೆ ಸಂಗ್ರಹ ಮಾಡಿದ್ದು, ಇದಾದ ಬಳಿಕ ದಲಿತ ಸಮುದಾಯಗಳಿಂದ ಸಂಗ್ರಹಿಸಲಾದ ಹಣವನ್ನು “ಅಶುದ್ಧ” ಎಂದು ಅವಮಾನಿಸಿ ವಾಪಸ್ ನೀಡಿರುವ ಘಟನೆ ರಾಜಸ್ಥಾನದ ಜಲಾವರ್ ನಲ್ಲಿ ನಡೆದಿದೆ.

ಜನವರಿ 22ರಂದು ಅಯೋಧ್ಯೆಯ  ರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ದೇಣಿಗೆ  ಸಂಗ್ರಹಿಸಲಾಗಿತ್ತು.

ಮೊದಲಿಗೆ ದಲಿತರಿಂದ ಹಣವನ್ನು ದೇಣಿಗೆಯಾಗಿ ಸ್ವೀಕರಿಸಲಾಗಿತ್ತು. ಆ ಬಳಿಕ, ದೇವಸ್ಥಾನಗಳ ಆಚರಣೆಗೆ ದಲಿತರಿಂದ ಬಂದ ಹಣವನ್ನು ಸ್ವೀಕರಿಸುವುದಿಲ್ಲ, ದಲಿತರು ನೀಡಿದ ದೇಣಿಗೆಯಿಂದ  ಮಾಡಿದ ಪ್ರಸಾದ ಅಶುದ್ಧ ಎಂದು ಸವರ್ಣಿಯರು ವಿರೋಧಿಸಿದ್ದು, ಹೀಗಾಗಿ ದಲಿತರಿಂದ ಸಂಗ್ರಹಿಸಿದ ಹಣವನ್ನು ವಾಪಸ್ ನೀಡಲಾಗಿದೆ. ಈ ಕೃತ್ಯದಿಂದ ತೀವ್ರ ಬೇಸರಗೊಂಡ ದಲಿತ ಸಮಾಜ ಜಲವರ್ ಜಿಲ್ಲಾಡಳಿತಕ್ಕೆ ದೂರು ನೀಡಿದೆ.

ಈ ವಿಚಾರವಾಗಿ ಮಾತನಾಡಿದ ಗ್ರಾಮದ ನಿವಾಸಿ ಮುಖೇಶ್ ಮೇಘವಾಲ್,  ಪರಿಶಿಷ್ಟ ಜಾತಿ ಸೇರಿದಂತೆ ವಿವಿಧ ಸಮುದಾಯಗಳನ್ನು ರಾಮಮಂದಿರದ ಕಾರ್ಯಕ್ರಮಗಳಿಗೆ ದೇಣಿಗೆ ನೀಡುವಂತೆ ಸಂಪರ್ಕಿಸಿದ್ದರು. ದಲಿತರಿಂದಲೂ ದೇಣಿಗೆ ಸಂಗ್ರಹ ಮಾಡಿದ್ದರು. ಆದರೆ ಮರುದಿನ ದಲಿತರಿಂದ ಪಡೆದ ದೇಣಿಗೆಯನ್ನು ಹಿಂದಿರುಗಿಸಿದ್ದಾರೆ ಎಂದು ತಿಳಿಸಿದ್ದಾರೆ.

ಜನವರಿ 9ರಂದು ರಾತ್ರಿ 9 ಗಂಟೆಯ ಸುಮಾರಿಗೆ ನಮ್ಮ ಮನೆಯ ಬಳಿಗೆ ಬಂದ ಗ್ರಾಮದ ಖೇಮರಾಜ್ ಧಕಡ್ ಅವರ ಪುತ್ರ ರಾಮಸ್ವರೂಪ್, ಛೋಟುಲಾಲ್ ಅಲಿಯಾಸ್ ಚಂದ್ರಪ್ರಕಾಶ್, ಜಗದೀಶ್, ಭೈರುಲಾಲ್ ಘಾಕಡ್ ಅವರ ಮಗ ಮತ್ತು ಹೇಮರಾಜ್ ಢಾಕಡ್ ಅವರ ಪುತ್ರ ಮಹಾವೀರ್,  ನಮ್ಮ ಜಾತಿಯ ಬಗ್ಗೆ ಅತ್ಯಂತ ಕೀಳು ಮಾತುಗಳನ್ನಾಡಿ, ನಿಮ್ಮಿಂದ ಸಂಗ್ರಹಿಸಿರುವ ಹಣವನ್ನು ದೇವರಿಗೆ ನೈವೇದ್ಯವಾಗಿ ಸ್ವೀಕರಿಸುವುದಿಲ್ಲ, ಆ ಹಣದಿಂದ ತಯಾರಿಸಿದ ಪ್ರಸಾದ ಅಶುದ್ಧ ಎಂದು ಅವಮಾನಿಸಿದ್ದಾರೆ ಎಂದು ಮುಖೇಶ್ ಮೇಘವಾಲ್ ತಿಳಿಸಿದ್ದಾರೆ.

ದಲಿತ ಸಮುದಾಯಕ್ಕೆ ಅವಮಾನಿಸಿದ ಬೆನ್ನಲ್ಲೇ ದೂರು ದಾಖಲಿಸಲಾಯಿತು. ಇದೀಗ ಪೊಲೀಸರು ದೂರು ಹಿಂಪಡೆದುಕೊಳ್ಳಿ ಎಂದು ದೂರುದಾರರಿಗೆ ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ ಎಂದು ಮುಖೇಶ್ ದೂರಿದರು.

ಪೊಲೀಸರು ಔಪಚಾರಿಕವಾಗಿ ದೂರನ್ನು ದಾಖಲಿಸಿಕೊಳ್ಳುತ್ತಿಲ್ಲ ಎಂದು ಮುಖೇಶ್ ಅವರು ಒತ್ತಿ ಹೇಳಿದ್ದಾರೆ. ಇನ್ನು ಪೊಲೀಸರ ತಾಳಕ್ಕೆ ತಕ್ಕ ಹಾಗೆ ಕುಣಿಯಲು ದಲಿತ ಸಮುದಾಯ ಕೂಡ ತಯಾರಿಲ್ಲ, ಪೊಲೀಸರು ಪ್ರಕರಣ ದಾಖಲಿಸಲು ವಿಫಲವಾದರೆ ದಲಿತ ಸಮುದಾಯ ಬೃಹತ್ ಪ್ರತಿಭಟನೆ ನಡೆಸಲು ಕೂಡ ಸಜ್ಜಾಗಿದೆ.

ನಮ್ಮ ಸಮುದಾಯಗಳ ಬಳಿ ದೇಣಿಗೆ ಬೇಡಿದ್ದಾರೆ. ನಾವು ಕೊಟ್ಟಿದ್ದೇವೆ, ಈಗ ಅದನ್ನು ಅಶುದ್ಧ ಅಂತ ಹೇಳಿ ನಮಗೆ ಅವಮಾನಿಸಿದ್ದಾರೆ, ನಾವು ನಮ್ಮ ಬಳಿಗೆ ದೇಣಿಗೆ ಬೇಡಲು ಬನ್ನಿ ಎಂದು ಕೇಳಿದೆವೆಯೇ? ನೀವೇ ದೇಣಿಗೆ ಕೇಳಿ ನೀವೇ ಅವಮಾನಿಸುತ್ತಿರೋದ್ಯಾಕೆ ಅಂತ ಸವರ್ಣಿಯರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version