ಪತ್ನಿ, ಇಬ್ಬರು ಮಕ್ಕಳನ್ನು ಕೊಂದು 3 ದಿನ ಮೃತದೇಹಗಳೊಂದಿಗೆ ಕಾಲ ಕಳೆದ ಪತಿ!

murder
01/04/2024

ಲಕ್ನೋ: ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿ ಮೂರು ದಿನಗಳ ಕಾಲ ಪತಿ ಮೃತದೇಹಗಳೊಂದಿಗೆ ಕಾಲ ಕಳೆದ ಘಟನೆ ಲಕ್ನೋದ ಬಿಜ್ನೋರ್ ಪ್ರದೇಶದ ಸರವನ್ ನಗರ ಪ್ರದೇಶದಲ್ಲಿನಡೆದಿದೆ.

ಪತ್ನಿ ಜ್ಯೋತಿ (30) ಮಕ್ಕಳಾದ ಪಾಯಲ್ (6) ಮತ್ತು ಆನಂದ್ (3) ಹತ್ಯೆಗೀಡಾದವರಾಗಿದ್ದು, ಪತಿ ರಾಮ್ ಲಗಾನ್ ಎಂಬಾತ ಹತ್ಯೆ ನಡೆಸಿದ ಆರೋಪಿಯಾಗಿದ್ದಾನೆ.

7 ವರ್ಷಗಳ ಹಿಂದೆ ಜ್ಯೋತಿ ಹಾಗೂ ರಾಮ್ ಲಗಾನ್ ವಿವಾಹವಾಗಿದ್ದರು. ಇತ್ತೀಚೆಗೆ ಪತ್ನಿ ಫೋನ್ ನಲ್ಲಿ ಹೆಚ್ಚು ಮಾತನಾಡುತ್ತಿರುವುದು ರಾಮ್ ಲಗಾನ್ ಗೆ ಇಷ್ಟವಿರಲ್ಲ, ಅಲ್ಲದೇ ಆಕೆಗೆ ಅಕ್ರಮ ಸಂಬಂಧವಿದೆ ಎಂದು ರಾಮ್ ಲಗಾನ್ ಅನುಮಾನಪಡುತ್ತಿದ್ದ. ಇದರಿಂದಾಗಿ ಪತಿ ಪತ್ನಿ ನಡುವೆ ನಿರಂತರ ಜಗಳ ನಡೆಯುತ್ತಿತ್ತು.

ಮಾರ್ಚ್ 28ರಂದು ರಾತ್ರಿ ಕೂಡ ಪತ್ನಿ ಫೋನ್ ನಲ್ಲಿ ಮಾತನಾಡುತ್ತಿರುವ ಬಗ್ಗೆ ಜಗಳ ನಡೆದಿದೆ. ಈ ವೇಳೆ ತೀವ್ರ ಆಕ್ರೋಶಗೊಂಡ ರಾಮ್ ಲಗಾನ್ ಪತ್ನಿಯನ್ನು ಕತ್ತು ಹಿಸುಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ತನ್ನಿಬ್ಬರು ಮಕ್ಕಳನ್ನೂ ಅಮಾನವೀಯವಾಗಿ ಹತ್ಯೆ ಮಾಡಿದ್ದಾನೆ.

ಹತ್ಯೆಯ ನಂತರ ಮೂರು ದಿನಗಳ ಕಾಲ ಆರೋಪಿ ಮನೆಯಲ್ಲೇ ರಾತ್ರಿ ಕಳೆದಿದ್ದಾನೆ. ಈ ವೇಳೆ ಮೃತದೇಹಗಳು ಕೊಳೆತು ಪಕ್ಕದ ಮನೆಯವರಿಗೆ ದುರ್ವಾಸನೆ ಬೀರಿತ್ತು. ಆರೋಪಿ ಮನೆಯಲ್ಲಿ ಇಲ್ಲದಿರುವ ವೇಳೆ ಪಕ್ಕದ ಮನೆಯವರು ಕಿಟಕಿ ತೆರೆದು ನೋಡಿದಾಗ ಮೃತದೇಹಗಳನ್ನು ಗೋಣಿಯಲ್ಲಿ ತುಂಬಿಸಿಟ್ಟಿರುವುದು ಪತ್ತೆಯಾಗಿತ್ತು ಎಂದು ಪೊಲೀಸ್ ಉಪ ಆಯುಕ್ತ (ದಕ್ಷಿಣ) ಟಿಎಸ್ ಸಿಂಗ್ ತಿಳಿಸಿದ್ದಾರೆ.

ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಮಾನವೀಯವಾಗಿ ಹತ್ಯೆ ಮಾಡಿದ ನಂತರ ಆರೋಪಿ ಮೂರು ದಿನಗಳ ಕಾಲ ಮೃತದೇಹಗಳೊಂದಿಗೆ ಕಳೆದು ನಂತರ ಕೋಣೆಯಿಂದ ತೆರಳಿದ್ದ. ಇತ್ತ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ, ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದರು.

ಮೂವರನ್ನು ಕೊಂದರೂ ಆರೋಪಿ ರಾಮ್ ಲಗಾನ್ ಸ್ವಲ್ಪವೂ ಪಶ್ಚಾತಾಪವೇ ಇಲ್ಲದೇ ಬಿಂದಾಸ್ ಆಗಿ ಓಡಾಡುತ್ತಿದ್ದ. ಹೋಳಿ ಆಚರಿಸಲೆಂದು ಆತ ತನ್ನ ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version