ದಲಿತ ಮುಖಂಡ ಸಂದೇಶ್ ಅವರ ಜೊತೆ ನಾನಿದ್ದೇನೆ: ಸಿದ್ದರಾಮಯ್ಯ
ಕೋಲಾರದ ದಲಿತ ಮುಖಂಡ ಸಂದೇಶ್ ಅವರ ಮೇಲೆ ದುರುದ್ದೇಶಪೂರಿತವಾಗಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಮಾನಸಿಕ ಹಿಂಸೆ ನೀಡಿ ಆತನನ್ನು ಆತ್ಮಹತ್ಯೆಗೆ ಪ್ರಯತ್ನಿಸುವಂತೆ ಮಾಡಿರುವವರು ಯಾರೇ ಆಗಲಿ ಅಂಥವರನ್ನು ತಕ್ಷಣ ಬಂಧಿಸಿ, ಪ್ರಕರಣದ ಸೂಕ್ತ ತನಿಖೆ ನಡೆಸಿ ಸಂತ್ರಸ್ತನಿಗೆ ನ್ಯಾಯ ಕೊಡಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.
ಕೋಲಾರದ ಸಾಮಾಜಿಕ ಹೋರಾಟಗಾರ ಸಂದೇಶ್ ಸಾವಿಗೆ ಶರಣಾಗಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಧ್ವನಿಯಿಲ್ಲದ ಜನರ ಪರವಾದ ಹೋರಾಟದ ಹಾದಿಯನ್ನು ಆಯ್ಕೆ ಮಾಡಿಕೊಂಡ ಮೇಲೆ ಆ ಹಾದಿಯಿಂದ ವಿಮುಖಗೊಳಿಸುವ ನಿರಂತರ ಪ್ರಯತ್ನಗಳು ಖಂಡಿತಾ ನಡೆಯುತ್ತವೆ, ಇಂಥಾ ದುಷ್ಟರ ಪ್ರಯತ್ನಗಳಿಂದ ನೊಂದು ದುಡುಕಿ ಆತ್ಮಹತ್ಯೆಯ ನಿರ್ಧಾರ ಕೈಗೊಂಡರೆ ನಿಮ್ಮ ಬೆನ್ನ ಹಿಂದಿರುವ ಜನ, ನಿಮ್ಮ ಕುಟುಂಬ ಎರಡೂ ಅನಾಥವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ವ್ಯವಸ್ಥೆಯಿಂದ ಅನ್ಯಾಯ, ಅಪಮಾನಕ್ಕೀಡಾಗಿ ನೊಂದಿರುವ ದಲಿತ ಮುಖಂಡ ಸಂದೇಶ್ ಅವರ ಜೊತೆ ನಾನಿದ್ದೇನೆ. ಅಪಮಾನಗಳನ್ನೇ ಸವಾಲಿನಂತೆ ಸ್ವೀಕರಿಸಿ ಗೆದ್ದ ಬಾಬಾ ಸಾಹೇಬರು ನೀಡಿರುವ ಸಂವಿಧಾನ ನಮ್ಮ ಜೊತೆಗಿದೆ. ಹೀಗಾಗಿ ನ್ಯಾಯ ಸಿಗುವ ಪೂರ್ಣ ವಿಶ್ವಾಸ ನನಗಿದೆ. ಸಂದೇಶ್ ಅವರು ಆದಷ್ಟು ಶೀಘ್ರ ಗುಣಮುಖರಾಗಿ ಬರಲಿ ಎಂದು ಹಾರೈಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























