ಭ್ರಷ್ಟ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದರೆ ಸಂವಿಧಾನ ರಕ್ಷಿಸಿದಂತಾಗುತ್ತದೆ: ಪ್ರೊ.ಎಂ.ಪಿ.ಉಮೇಶ್ಚಂದ್ರ 

umeshchandra
30/01/2024

ಮಂಗಳೂರು: ಭ್ರಷ್ಟ ರಾಜಕಾರಣಿಗಳು ಹಾಗೂ ಭ್ರಷ್ಟ ಅಧಿಕಾರಿಗಳನ್ನು ನಾವು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದರೆ ಮಾತ್ರ ಸಂವಿಧಾನವನ್ನು ರಕ್ಷಿಸಿದಂತಾಗುತ್ತದೆ ಎಂದು ಮಂಗಳೂರು ವಿಶ್ವ ವಿದ್ಯಾಲಯದ ಸಮೂಹ ಮಾಧ್ಯಮದ ಮುಖ್ಯಸ್ಥರಾದ ಪ್ರೊ.ಎಂ.ಪಿ.ಉಮೇಶ್ಚಂದ್ರ  ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ )ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಮಂಗಳೂರು ನಗರದ ಎನ್. ಜಿ. ಓ. ಹಾಲ್ ಸಂವಿಧಾನ ಜಾರಿಯಾದ ದಿನದ ಅಂಗವಾಗಿ “ಭಾರತದ ಸಂವಿಧಾನ -ಪ್ರಸ್ತುತ ಸವಾಲುಗಳು ಹಾಗೂ ನಮ್ಮ ಜವಾಬ್ದಾರಿ ”  ಎಂಬ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಭಾರತದ ಸಂವಿಧಾನವು ಪ್ರಪಂಚದಲ್ಲಿಯೇ ಅತ್ಯುನ್ನತವಾದದ್ದು. ಸರ್ವರಿಗೂ ಸಮಪಾಲು ಸಮಬಾಳು, ಸಮಾನ ಅವಕಾಶ, ವ್ಯಕ್ತಿ ಗೌರವವನ್ನು ಕಲ್ಪಿಸಿದೆ. ಅಂಬೇಡ್ಕರ್ ರವರು ರಚಿಸಿದ ಸಂವಿಧಾನ ಜಾರಿಯಾಗಿ 75 ನೇ ವರ್ಷವನ್ನು ಪೂರೈಸುತ್ತಿದೆ.75 ನೇ ವರ್ಷದ ಸವಿ ನೆನಪನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಹಳ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ನಡೆಸಬೇಕಾಗಿತ್ತು. ಆದರೆ ದುರಾದೃಷ್ಟವಶಾತ್ ನಮ್ಮನ್ನಾಳುವ ಸರಕಾರಗಳು 75 ನೇ ವರ್ಷಚಾರಣೆಯನ್ನು ಕಾಟಾಚಾರಕ್ಕೆ ಎಂಬಂತೆ ಮಾಡುವ ಮೂಲಕ ಸಂವಿಧಾನ ಹಾಗೂ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ದೇಶದ ಸಂವಿಧಾನದ ಅಡಿಯಲ್ಲಿ ಎಲ್ಲಾ ಪ್ರಜೆಗಳಿಗೂ ಸಮಾನ ಅವಕಾಶ ನೀಡಲಾಗಿದೆ. ಪ್ರತಿಯೊಬ್ಬ ನಾಗರಿಕನೂ ಕೂಡಾ ಸಂವಿಧಾನ ನೀಡಿರುವ ಹಕ್ಕು ಹಾಗೂ ಕರ್ತವ್ಯವನ್ನು ನಿರ್ವಹಿಸಲೇಬೇಕು. ದೇಶದ ಎಲ್ಲಾ ವಿಚಾರವೂ ಸಂವಿಧಾನದ ಅಡಿಯಲ್ಲೇ ನಡೆಯಬೇಕು. ಇಲ್ಲಿ ಕಾನೂನನ್ನು ಉಲ್ಲಂಘನೆ ಯಾರೇ ಮಾಡಿದರೂ ಶಿಕ್ಷಾರ್ಹ ಅಪರಾಧವೇ. ಅದು ದಲಿತರಿಗೂ ಒಂದೇ, ಬಲಿತರಿಗೂ ಒಂದೇ, ಬಡವನಿಗೂ ಒಂದೇ, ಶ್ರೀಮಂತನಿಗೂ ಒಂದೇ, ಅದರಲ್ಲಿ ವಿನಾಯಿತಿ ಇಲ್ಲ. ಸಂವಿಧಾನವನ್ನು ಗೌರವಿಸುವವರು ಮತ್ತು ಪ್ರೀತಿಸುವವರು ಸಂವಿಧಾನವನ್ನು ಪಾಲಿಸಲೇಬೇಕು. ನಮ್ಮ ಸಂವಿಧಾನ ಎಷ್ಟೇ ಬಲಿಷ್ಠವಾಗಿದ್ದರೂ ಆಡಳಿತ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರ, ಲಂಚಕೋರತನ ನಮ್ಮ ಸಂವಿಧಾನವನ್ನು ದುರ್ಬಳಗೊಳುಸುವ ಮೂಲಕ ಅದರ ಆಶಯಗಳನ್ನು ವಿಫಲಗೊಳಿಸುತ್ತಿದೆ. ಭ್ರಷ್ಟ ರಾಜಕಾರಣಿಗಳು ಹಾಗೂ ಭ್ರಷ್ಟ ಅಧಿಕಾರಿಗಳನ್ನು ನಾವು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದರೆ ಮಾತ್ರ ಸಂವಿಧಾನವನ್ನು ರಕ್ಷಿಸಿದಂತಾಗುತ್ತದೆ ಎಂದರು.

ವಿಚಾರ ಮಂಥನವನ್ನುದ್ದೇಶಿಸಿ ಮಾತನಾಡಿದ ದ. ಸಂ. ಸ. ರಾಜ್ಯ ಸಂಘಟನಾ ಸಂಚಾಲಕರಾದ ಎಂ. ದೇವದಾಸ್, ಸಂವಿಧಾನ ರಚನಾ ಕರಡು ಸಮಿತಿಯಲ್ಲಿ ಹಲವಾರು ಜನರಿದ್ದರೂ, ಅಂತಿಮವಾಗಿ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಡಾ.ಬಿ. ಆರ್.ಅಂಬೇಡ್ಕರ್ ಮಾತ್ರ. ನಮ್ಮ ಸಂವಿಧಾನ ಪ್ರತಿಯೊಬ್ಬ ನಾಗರಿಕನ ವ್ಯಕ್ತಿ ಗೌರವವನ್ನು ಎತ್ತಿ ಹಿಡಿದಿದೆ. ಧರ್ಮ ನಿರಾಪೇಕ್ಷಿತವಾಗಿದೆ. ಯುವ ಜನರನ್ನು ಒಗ್ಗೂಡಿಸಿ ದೇಶದ ಅಭಿವೃದ್ದಿಯಲ್ಲಿ ಕೈಜೋಡಿಸಬೇಕಾಗಿದ್ದ ಯುವ ಜನಾಂಗ ಇತ್ತೀಚಿನ ಕೆಲ ದಶಕಗಳಿಂದ ಧರ್ಮದ ನಶೆಯಲ್ಲಿ ತೇಲುತ್ತಿದ್ದು, ಧರ್ಮ– ಧರ್ಮಗಳ ನಡುವೆ ಕಂದಕವನ್ನು ಸೃಷ್ಟಿಸುವ ಮೂಲಕ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಸಂವಿಧಾನದ ಮೂಲ ಆಶಯಗಳನ್ನು ಬಲಿ ಕೊಡುತ್ತಿದೆ. ಇದರಿಂದಾಗಿ ದೇಶದ ಅಭಿವೃದ್ದಿಯೂ ಕುಂಟಿತವಾಗುತ್ತಿದೆ. ಸಂವಿಧಾನದ ಮೂಲ ಆಶಯಗಳನ್ನು ಅರಿಯದ, ಸಂವಿಧಾನವನ್ನು ಸರಿಯಾಗಿ ಓದಿ ಅರ್ಥೈಸಿಕೊಳ್ಳದ ಯುವ ಜನಾಂಗವು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವ ಜೊತೆಗೆ ದೇಶದ ಏಕತೆಯನ್ನೂ ಛಿದ್ರಗೋಳಿಸುತ್ತಿದ್ದಾರೆ. ನಾವು ಸಂವಿಧಾನದ ಕುರಿತು ಹಳ್ಳಿ ಹಳ್ಳಿಯ ಯುವ ಸಮುದಾಯಗಳಿಗೆ ಜಾಗೃತಿಯನ್ನು ಮೂಡಿಸುವ ಮೂಲಕ ಸಂವಿಧಾನವನ್ನು ರಕ್ಷಿಸುವ ಅಭಿಯಾನವನ್ನು ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ. ಸಂ.ಸ. ಜಿಲ್ಲಾ ಸಂಚಾಲಕರಾದ ರಘು. ಕೆ. ಎಕ್ಕಾರು ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಮಹಿಳಾ ಸಂಚಾಲಕಿ ಶ್ರೀಮತಿ ಸರೋಜಿನಿ ಬಂಟ್ವಾಳ, ಸಮುದಾಯ ಸಂಘಟನೆಯ ಸಂಚಾಲಕರಾದ ವಾಸುದೇವ ಉಚ್ಚಿಲ, ತಾಲೂಕು ಸಂಘಟನಾ ಸಂಚಾಲಕರಾದ ರುಕ್ಕಯ್ಯ ಕರಂಬಾರು ಉಪಸ್ಥಿತರಿದ್ದರು.

ದಲಿತ ಕಲಾ ಮಂಡಳಿ ಜಿಲ್ಲಾ ಸಂಚಾಲಕರಾದ ಸಂಕಪ್ಪ ಕಾಂಚನ್ ಮತ್ತು ಬಳಗದವರು ಕ್ರಾಂತಿಗೀತೆ ಹಾಡಿದರು.  ಕಮಲಾಕ್ಷ ಬಜಾಲ್ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು.

ಇತ್ತೀಚಿನ ಸುದ್ದಿ

Exit mobile version