ಕನಿಷ್ಠ ವೇತನ ಕೂಡಲೇ ಜಾರಿಗೊಳಿಸಿ, ಇಲ್ಲವೇ ತೀವ್ರ ಪ್ರತಿರೋಧ ಎದುರಿಸಿ: ಜೆ. ಬಾಲಕೃಷ್ಣ ಶೆಟ್ಟಿ ಎಚ್ಚರಿಕೆ

citu
26/07/2026

ಮಂಗಳೂರು / ಗುರುಪುರ: ಸಮಾಜದ ಸರ್ವತೋಮುಖ ಅಭಿವೃದ್ಧಿಯಲ್ಲಿ ಕಾರ್ಮಿಕರ ಶ್ರಮವೇ ಮೂಲಾಧಾರವಾಗಿದ್ದು, ಅವರ ಶ್ರಮದ ಮೇಲೆಯೇ ದೇಶದ ಆರ್ಥಿಕ ಚಕ್ರ ತಿರುಗುತ್ತದೆ. ಆದರೆ ಆಳುವ ಸರ್ಕಾರಗಳು ಕಾರ್ಮಿಕರ ಶ್ರಮಕ್ಕೆ ಕಿಂಚಿತ್ತೂ ಗೌರವ ನೀಡದೆ, ಬಂಡವಾಳಶಾಹಿಗಳ ಲಾಭಕೋರತನಕ್ಕೆ ಸಾಥ್ ನೀಡುತ್ತಿರುವುದು ಖಂಡನೀಯ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಕಾರ್ಮಿಕ ಮುಖಂಡ ಜೆ. ಬಾಲಕೃಷ್ಣ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುಪುರ ಕೈಕಂಬದ ಮಾತಾಕೃಪಾ ಹಾಲ್‌ನಲ್ಲಿ ಸಿಐಟಿಯು ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಗುರುಪುರ ವಲಯ ಮಟ್ಟದ ಕಾರ್ಮಿಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಶಕಗಳ ಕಾಲ ನಡೆದ ಸಮರಶೀಲ ಹೋರಾಟಗಳ ಫಲವಾಗಿ ರಾಜ್ಯ ಸರ್ಕಾರವು ಮೇ 22 ರಂದು ಕನಿಷ್ಠ ಕೂಲಿಯನ್ನು ಘೋಷಣೆ ಮಾಡಿದ್ದರೂ, ಇಂದಿನವರೆಗೂ ಅದನ್ನು ಅಧಿಕೃತವಾಗಿ ಜಾರಿಗೊಳಿಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವು ಇನ್ನಾದರೂ ವಿಳಂಬ ಮಾಡದೆ ಆದಷ್ಟು ಬೇಗ ಕನಿಷ್ಠ ವೇತನವನ್ನು ಅನುಷ್ಠಾನಕ್ಕೆ ತರಬೇಕು, ಇಲ್ಲವಾದರೆ ರಾಜ್ಯಾದ್ಯಂತ ತೀವ್ರ ಸ್ವರೂಪದ ಕಾರ್ಮಿಕ ಪ್ರತಿರೋಧ ಮತ್ತು ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಸಮಾವೇಶಕ್ಕೆ ಶುಭಕೋರಿ ಮಾತನಾಡಿದ ಜಿಲ್ಲಾ ರೈತ-ಕಾರ್ಮಿಕ ಮುಖಂಡ ಸದಾಶಿವದಾಸ್ ಅವರು ಜಿಲ್ಲೆಯ ಕಾರ್ಮಿಕ ಚಳುವಳಿಯ ಇತಿಹಾಸವನ್ನು ಸ್ಮರಿಸಿದರು. ದೇಶದ ಕಾರ್ಮಿಕ ಚಳುವಳಿಯನ್ನು ದುರ್ಬಲಗೊಳಿಸಲು ಕೇಂದ್ರ ಸರ್ಕಾರವು 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ, 4 ಶ್ರಮ ಸಂಹಿತೆಗಳನ್ನಾಗಿ ರೂಪಿಸಿ ಕಾರ್ಮಿಕ ವರ್ಗವನ್ನು ಮತ್ತೆ ಗುಲಾಮಗಿರಿಗೆ ತಳ್ಳುವ ಷಡ್ಯಂತ್ರ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.

ಸಮಾರೋಪ ಭಾಷಣ ಮಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು, ದೇಶದ ಕಾರ್ಮಿಕ ಚಳುವಳಿಯಲ್ಲಿ ಸಿಐಟಿಯು ಧ್ರುವತಾರೆಯಂತೆ ಮಿಂಚುತ್ತಿದ್ದು, ನಿರಂತರವಾಗಿ ಕಾರ್ಮಿಕರ ನ್ಯಾಯಯುತ ಹಕ್ಕುಗಳಿಗಾಗಿ ಶ್ರಮಿಸುತ್ತಿದೆ ಎಂದರು. ಜಿಲ್ಲೆಯ ಎಲ್ಲಾ ವಿಭಾಗದ ಶ್ರಮಿಕರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಸಿಐಟಿಯು ಜೊತೆ ಕೈಜೋಡಿಸಿ ಚಳುವಳಿಯನ್ನು ಮತ್ತಷ್ಟು ಬಲಪಡಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಿಐಟಿಯು ಗುರುಪುರ ವಲಯ ಕಾರ್ಯದರ್ಶಿ ನೋಣಯ್ಯ ಗೌಡ ಅವರು ಕಳೆದ 4 ವರ್ಷಗಳ ಚಟುವಟಿಕೆಗಳ ಕರಡು ವರದಿ ಮಂಡಿಸಿದರು. ವರದಿಯ ಮೇಲಿನ ಚರ್ಚೆಯ ನಂತರ ಕಾರ್ಮಿಕರ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಲವು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಬಳಿಕ ಮುಂದಿನ ಅವಧಿಗಾಗಿ 25 ಮಂದಿ ಸದಸ್ಯರನ್ನೊಳಗೊಂಡ ನೂತನ ಸಿಐಟಿಯು ಗುರುಪುರ ವಲಯ ಸಮನ್ವಯ ಸಮಿತಿಯನ್ನು ರಚಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ವಲಯಾಧ್ಯಕ್ಷ ಬಾಬು ಪೂಜಾರಿ ವಹಿಸಿದ್ದರು. ವೇದಿಕೆಯಲ್ಲಿ ಸಿಐಟಿಯು ಜಿಲ್ಲಾ ನಾಯಕಿಯರಾದ ವಸಂತಿ ಕುಪ್ಪೆಪದವು ಮತ್ತು ಭವ್ಯಾ ಮುಚ್ಚೂರು ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version