ಶೋಷಿತರ ಜಾಗೃತಿ ಸಮಾವೇಶದಲ್ಲಿ ಕ್ವಿಂಟಾಲ್ ಗಟ್ಟಲೇ ಚಿಕನ್ ಬಿರಿಯಾನಿ ಮಣ್ಣುಪಾಲು!

ಚಿತ್ರದುರ್ಗ: ಜನವರಿ 28ರಂದು ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಪೀಠದ ಬಳಿ ನಡೆದ ರಾಜ್ಯ ಮಟ್ಟದ ಶೋಷಿತರ ಜಾಗೃತಿ ಸಮಾವೇಶದಲ್ಲಿ ಕ್ವಿಂಟಾಲ್ ಗಟ್ಟಲೇ ಚಿಕನ್ ಬಿರಿಯಾನಿ ಮಣ್ಣು ಪಾಲಾಗಿರುವ ಘಟನೆ ನಡೆದಿದೆ.
ಶೋಷಿತ ಸಮುದಾಯಗಳ ಜಾಗೃತಿ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 5 ಲಕ್ಷ ಜನರು ಸೇರುವ ನಿರೀಕ್ಷೆ ಇದ್ದು, ಮೂರು ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದರು. ಭಾರೀ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಜನಸ್ತೋಮ ಸೇರಿದ್ದರೂ ಆಹಾರವನ್ನು ಪೋಲು ಮಾಡಿರುವುದು ವಿಪಕ್ಷಗಳ ಟೀಕೆಗೆ ಕಾರಣವಾಗಿದೆ.
ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ.ಶಿವಕುಮಾರ್ ಭಾಗಿಯಾಗಿದ್ದರು. ಹಸಿವಿನಿಂದ ಜನ ಇರಬಾರದು ಎಂದು ಬಿರಿಯಾನಿಯನ್ನು ತಯಾರಿಸಲಾಗಿತ್ತು. ಆದ್ರೆ ಕಾರ್ಯಕ್ರಮದ ಆಯೋಜಕರು ಸರಿಯಾದ ನಿರ್ವಹಣೆ ಮಾಡದ ಕಾರಣ ಉಳಿದ ಬಿರಿಯಾನಿಯನ್ನು ನೆಲದಲ್ಲಿ ಚೆಲ್ಲಿರುವುದು ಕಂಡು ಬಂದಿದೆ.
ಉಳಿದ ಆಹಾರವನ್ನು ಅನಾಥಶ್ರಮ ಅಥವಾ ನಿರಾಶ್ರಿತರ ಕೇಂದ್ರಕ್ಕೆ ನೀಡಬಹುದಿತ್ತು. ಈ ರೀತಿ ಕ್ವಿಂಟಾಲ್ ಗಟ್ಟಲೆ ಆಹಾರವನ್ನು ಮಣ್ಣುಪಾಲು ಮಾಡಿರುವುದು ಎಷ್ಟು ಸರಿ? ಅನ್ನೋ ಪ್ರಶ್ನೆಗಳು ಕೇಳಿ ಬಂದಿವೆ.