ಬಹ್ರೇನ್‌ ನ ಪೆಟ್ರೋಕೆಮಿಕಲ್ ಘಟಕ ಮತ್ತು ಕುವೈತ್ ವಿದ್ಯುತ್ ಕೇಂದ್ರಗಳ ಮೇಲೆ ಇರಾನ್ ದಾಳಿ

petrochemical plant
05/04/2026

ದುಬೈ: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ವಿಕೋಪಕ್ಕೆ ಹೋಗುತ್ತಿದ್ದು, ಅರಬ್ ರಾಷ್ಟ್ರಗಳ ಮೇಲೆ ಇದರ ಪರಿಣಾಮ ಬೀರುತ್ತಿದೆ. ಭಾನುವಾರ ಇರಾನ್ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳಿಂದ ಬಹ್ರೇನ್ ಮತ್ತು ಕುವೈತ್‌ನ ಪ್ರಮುಖ ಇಂಧನ ಮೂಲಸೌಕರ್ಯಗಳಿಗೆ ಹಾನಿಯಾಗಿದೆ.

ಬಹ್ರೇನ್‌ ನ ಪ್ರಮುಖ ‘ಗಲ್ಫ್ ಪೆಟ್ರೋಕೆಮಿಕಲ್ ಇಂಡಸ್ಟ್ರೀಸ್ ಕಂಪನಿ’ಯ (GPIC) ಹಲವಾರು ಕಾರ್ಯನಿರ್ವಹಣಾ ಘಟಕಗಳ ಮೇಲೆ ಇರಾನ್‌ನ ಡ್ರೋನ್‌ಗಳು ದಾಳಿ ನಡೆಸಿವೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಬಹ್ರೇನ್ ಸರ್ಕಾರ ತಿಳಿಸಿದೆ. ಸದ್ಯ ಹಾನಿಯ ಪ್ರಮಾಣವನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಕುವೈತ್‌ ನಲ್ಲಿ ಎರಡು ಪ್ರಮುಖ ವಿದ್ಯುತ್ ಉತ್ಪಾದನಾ ಮತ್ತು ನೀರು ಶುದ್ಧೀಕರಣ ಘಟಕಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಇದರಿಂದಾಗಿ ಎರಡು ವಿದ್ಯುತ್ ಘಟಕಗಳು ಸ್ಥಗಿತಗೊಂಡಿದ್ದು, ಭಾರಿ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಇದರ ಜೊತೆಗೆ ಕುವೈತ್‌ನ ‘ಶುವೈಕ್’ ತೈಲ ಸಂಕೀರ್ಣದಲ್ಲೂ ಡ್ರೋನ್ ದಾಳಿಯಿಂದಾಗಿ ಬೆಂಕಿ ಕಾಣಿಸಿಕೊಂಡಿತ್ತು.

ಯುಎಇಯ ಅಬುಧಾಬಿಯಲ್ಲಿರುವ ‘ಬೊರೌಜ್’ (Borouge) ಪೆಟ್ರೋಕೆಮಿಕಲ್ ಘಟಕದ ಮೇಲೆ ನಡೆದ ದಾಳಿಯನ್ನು ಅಲ್ಲಿನ ವಾಯು ರಕ್ಷಣಾ ವ್ಯವಸ್ಥೆಯು ಯಶಸ್ವಿಯಾಗಿ ತಡೆದಿದೆ. ಆದರೆ, ಪತನಗೊಂಡ ಕ್ಷಿಪಣಿಯ ಅವಶೇಷಗಳಿಂದಾಗಿ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯವು ಭಾನುವಾರ ತನ್ನತ್ತ ನುಗ್ಗಿ ಬರುತ್ತಿದ್ದ ಕ್ಷಿಪಣಿಯೊಂದನ್ನು ಹೊಡೆದುರುಳಿಸಿರುವುದಾಗಿ ವರದಿ ಮಾಡಿದೆ.

ಅಮೆರಿಕ ಮತ್ತು ಇಸ್ರೇಲ್ ಇರಾನ್‌ನ ಇಂಧನ ಮೂಲಸೌಕರ್ಯಗಳು ಮತ್ತು ಸೇತುವೆಗಳ ಮೇಲೆ ದಾಳಿ ನಡೆಸಿರುವುದಕ್ಕೆ ಪ್ರತಿಯಾಗಿ ಇರಾನ್ ಈ ಸರಣಿ ದಾಳಿಗಳನ್ನು ನಡೆಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಗಲ್ಫ್ ರಾಷ್ಟ್ರಗಳ ಪ್ರಮುಖ ಆರ್ಥಿಕ ಮೂಲವಾಗಿರುವ ತೈಲ ಮತ್ತು ಅನಿಲ ಘಟಕಗಳನ್ನೇ ಗುರಿಯಾಗಿಸಿಕೊಂಡಿರುವುದು ಜಾಗತಿಕ ಇಂಧನ ಮಾರುಕಟ್ಟೆಯಲ್ಲೂ ಆತಂಕ ಮೂಡಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version