ರಿಯಾದ್ ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ; ತಕ್ಕ ಪ್ರತ್ಯುತ್ತರ ನೀಡುವ ಎಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್
ರಿಯಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಮೇಲೆ ಇರಾನ್ ಬೆಂಬಲಿತ ಶಂಕಿತ ಡ್ರೋನ್ ಗಳು ದಾಳಿ ನಡೆಸಿದ್ದು, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಈ ದಾಳಿಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇರಾನ್ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಬೆಳಿಗ್ಗೆ ರಿಯಾದ್ನ ರಾಜತಾಂತ್ರಿಕ ವಲಯದಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ಎರಡು ಡ್ರೋನ್ ಗಳು ದಾಳಿ ನಡೆಸಿವೆ. ಸ್ಫೋಟದ ಸದ್ದು ಕೇಳಿಬಂದ ಬೆನ್ನಲ್ಲೇ ಕಚೇರಿಯ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡಿತು. ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯವು ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಕಟ್ಟಡಕ್ಕೆ ಅಲ್ಪ ಪ್ರಮಾಣದ ಹಾನಿಯಾಗಿದೆ ಎಂದು ತಿಳಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಿಯಾದ್, ಜಿದ್ದಾ ಮತ್ತು ಧಹ್ರಾನ್ನಲ್ಲಿರುವ ಅಮೆರಿಕದ ಎಲ್ಲಾ ದೂತಾವಾಸ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಡೊನಾಲ್ಡ್ ಟ್ರಂಪ್ ಎಚ್ಚರಿಕೆ:
ಈ ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಅಧ್ಯಕ್ಷ ಟ್ರಂಪ್, “ರಿಯಾದ್ ರಾಯಭಾರಿ ಕಚೇರಿಯ ಮೇಲೆ ದಾಳಿ ಮಾಡಿ ಆರು ಅಮೆರಿಕನ್ ಸೈನಿಕರನ್ನು ಕೊಂದಿರುವುದಕ್ಕೆ ಅಮೆರಿಕ ಎಂತಹ ಪ್ರತಿಕ್ರಿಯೆ ನೀಡಲಿದೆ ಎಂಬುದು ನಿಮಗೆ ಶೀಘ್ರದಲ್ಲೇ ತಿಳಿಯಲಿದೆ” ಎಂದು ಗುಡುಗಿದ್ದಾರೆ.
ಇತ್ತೀಚೆಗೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತರಾಗಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಘೋಷಿಸಿತ್ತು. ಇದರ ಭಾಗವಾಗಿಯೇ ಸೌದಿ ಅರೇಬಿಯಾ, ಬಹ್ರೇನ್, ಜೋರ್ಡಾನ್ ಮತ್ತು ಕತಾರ್ನಲ್ಲಿರುವ ಅಮೆರಿಕ ಹಾಗೂ ಇಸ್ರೇಲ್ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಸರಣಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿದೆ.
ಸೌದಿ ಅರೇಬಿಯಾ ಕೂಡ ಇರಾನ್ನ ಈ ಕ್ರಮವನ್ನು “ಅಪಾಯಕಾರಿ ಉಲ್ಬಣ” ಎಂದು ಕರೆದಿದ್ದು, ತನ್ನ ಪ್ರಾದೇಶಿಕ ಭದ್ರತೆಯನ್ನು ಕಾಪಾಡಿಕೊಳ್ಳಲು ಸಿದ್ಧವಿರುವುದಾಗಿ ತಿಳಿಸಿದೆ. ಇರಾನ್ ರಾಯಭಾರಿಗೆ ಸಮನ್ಸ್ ನೀಡುವ ಮೂಲಕ ಸೌದಿ ಸರ್ಕಾರ ತನ್ನ ಪ್ರತಿರೋಧವನ್ನು ದಾಖಲಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























