ಟ್ರಂಪ್ ಹತ್ಯೆಗೆ ಇರಾನ್ ಹೊಸ ಸ್ಕೆಚ್; ಅಮೆರಿಕಾಗೆ ರಹಸ್ಯ ಮಾಹಿತಿ ರವಾನಿಸಿದ ಇಸ್ರೇಲ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನ ಹತ್ಯೆ ಮಾಡಲು ಇರಾನ್ ಹೊಸದೊಂದು ಸಂಚು ರೂಪಿಸಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ಇಸ್ರೇಲ್ ಗುಪ್ತಚರ ಸಂಸ್ಥೆಯು ಅಮೆರಿಕಾಗೆ ಅತ್ಯಂತ ರಹಸ್ಯ ಹಾಗೂ ನಿರ್ದಿಷ್ಟ ಮಾಹಿತಿಯನ್ನು ಹಂಚಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಪರಮಾಣು ಒಪ್ಪಂದದ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ಗಂಭೀರ ಮಾಹಿತಿ ಹೊರಬಿದ್ದಿದೆ. 2020ರಲ್ಲಿ ಟ್ರಂಪ್ ಅವರ ಮೊದಲ ಅವಧಿಯ ಅಧ್ಯಕ್ಷತೆಯಲ್ಲಿ ಇರಾನ್‌ನ ಉನ್ನತ ಕಮಾಂಡರ್ ಖಾಸಿಂ ಸೊಲೈಮಾನಿ ಅವರನ್ನು ಅಮೆರಿಕ ಹತ್ಯೆ ಮಾಡಿತ್ತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಹಲವು ಬಾರಿ ಶಪಥ ಮಾಡಿತ್ತು.
“ನಾನು ಇರಾನ್ ನ ಪ್ರತಿಯೊಂದು ಹಿಟ್ ಲಿಸ್ಟ್ ನಲ್ಲಿದ್ದೇನೆ”: ಟ್ರಂಪ್
ಟರ್ಕಿಯ ಅಂಕಾರಾದಲ್ಲಿ ಇತ್ತೀಚೆಗೆ ನಡೆದ ನಾಟೋ (NATO) ಶೃಂಗಸಭೆಯಲ್ಲಿ ಸ್ವತಃ ಡೊನಾಲ್ಡ್ ಟ್ರಂಪ್ ಈ ಬಗ್ಗೆ ಮಾತನಾಡಿದ್ದಾರೆ. “ಅವರು (ಇರಾನ್) ಅಮೆರಿಕದ ನಾಯಕನನ್ನು, ಅಂದರೆ ನನ್ನನ್ನು ಮುಗಿಸಲು ಬಯಸಿದ್ದಾರೆ. ನಾನು ಇರಾನ್ ನ ಪ್ರತಿಯೊಂದು ಹಿಟ್ ಲಿಸ್ಟ್ ನಲ್ಲೂ ಮೊದಲ ಸ್ಥಾನದಲ್ಲಿದ್ದೇನೆ. ಇದುವರೆಗೆ ನಾನು ಸ್ವಲ್ಪ ಅದೃಷ್ಟಶಾಲಿಯಾಗಿದ್ದೇನೆ ಅಷ್ಟೇ. ಅವರು ಅತ್ಯಂತ ದುಷ್ಟರು. ಇಂತಹ ಕ್ಯಾನ್ಸರ್ ಅನ್ನು ನಾವು ಮೊದಲೇ ಬುಡಸಮೇತ ಕಿತ್ತೊಗೆಯಬೇಕು” ಎಂದು ಟ್ರಂಪ್ ಆಕ್ರೋಶ ಹೊರಹಾಕಿದ್ದಾರೆ.
ಅಮೆರಿಕ ತನಿಖಾ ಸಂಸ್ಥೆಗಳ ನಿಗಾ:
ಇಸ್ರೇಲ್ ನೀಡಿದ ಈ ಮಾಹಿತಿಯ ಬೆನ್ನಲ್ಲೇ ಅಮೆರಿಕದ ಗುಪ್ತಚರ ಸಂಸ್ಥೆಗಳು ಅಲರ್ಟ್ ಆಗಿದ್ದು, ಇರಾನ್ ನಿಂದ ಎದುರಾಗಬಹುದಾದ ಸಂಭಾವ್ಯ ಬೆದರಿಕೆಗಳ ಮೇಲೆ ತೀವ್ರ ನಿಗಾ ಇರಿಸಿವೆ. ಆದರೆ, ಇರಾನ್ ಸದ್ಯಕ್ಕೆ ಯಾವುದೇ ಸಕ್ರಿಯ ದಾಳಿಗೆ ಮುಂದಾಗಿರುವುದನ್ನು ಅಮೆರಿಕ ಇನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ಮತ್ತೊಂದೆಡೆ, ಇರಾನ್ ನ ನಿರ್ಧಾರಗಳ ಮೇಲೆ ಟ್ರಂಪ್ ಕಠಿಣ ನಿಲುವು ತಳೆಯುವಂತೆ ಪ್ರಭಾವ ಬೀರಲು ಇಸ್ರೇಲ್ ಈ ಮಾಹಿತಿಯನ್ನು ಹಂಚಿಕೊಂಡಿರಬಹುದು ಎಂದೂ ಕೆಲವು ಅಧಿಕಾರಿಗಳು ವಿಶ್ಲೇಷಿಸುತ್ತಿದ್ದಾರೆ.
ಈ ಬೆಳವಣಿಗೆಗಳ ನಡುವೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಡೊನಾಲ್ಡ್ ಟ್ರಂಪ್ ಅವರು ದೂರವಾಣಿ ಮೂಲಕ ಮಾತನಾಡಿ, ಉಭಯ ದೇಶಗಳ ನಡುವಿನ ಭದ್ರತಾ ಸಹಕಾರವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ನೆತನ್ಯಾಹು ಅವರು ಶೀಘ್ರದಲ್ಲೇ ವಾಷಿಂಗ್ಟನ್ ಗೆ ಭೇಟಿ ನೀಡಿ ಟ್ರಂಪ್ ಜೊತೆ ಮಾತುಕತೆ ನಡೆಸಲಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























