1:10 PM Wednesday 20 - August 2025

ಕೈದಿಗಳ ಮಕ್ಕಳಿಗೆ ಸರ್ಕಾರವೇ ನೀಡುತ್ತದೆ 20 ಲಕ್ಷ ರೂಪಾಯಿಗಳ ನೆರವು

07/11/2020

ವಿನೂತನ ಯೋಜನೆಗಳಿಗೆ ಕೇರಳ ರಾಜ್ಯ ಯಾವಾಗಲೂ ಸುದ್ದಿಯಾಗುತ್ತದೆ. ಆದರೆ ಈ ಬಾರಿ ಕೈದಿಗಳ ಮಕ್ಕಳ ಶಿಕ್ಷಣಕ್ಕಾಗಿ 20 ಲಕ್ಷ ರೂಪಾಯಿ ನೆರವನ್ನು ಘೋಷಿಸುವ ಮೂಲಕ ಮತ್ತೆ ಜನಪ್ರಿಯ ಯೋಜನೆಯೊಂದನ್ನು ಘೋಷಿಸಿದ್ದು, ಈ ಯೋಜನೆಯ ಪ್ರತಿಫಲವನ್ನು ಸುಮಾರು 6 ಸಾವಿರಕ್ಕೂ ಅಧಿಕ ಜೈಲು ಕೈದಿಗಳ ಮಕ್ಕಳು ಪಡೆಯಲಿದ್ದಾರೆ.

ಈ ಯೋಜನೆಯ ಬಗ್ಗೆ ಸಚಿವೆ ಕೆ.ಕೆ.ಶೈಲಜಾ ಅವರು ಶನಿವಾರ ಮಾಹಿತಿ ನೀಡಿದ್ದಾರೆ. ಕೇರಳ ಸರ್ಕಾರವು  ಕೈದಿಗಳ ಮಕ್ಕಳ ಶಿಕ್ಷಣಕ್ಕಾಗಿ 20 ಲಕ್ಷ ರೂ. ಗಳನ್ನು ಘೋಷಿಸಿದ್ದು,  ಮೂಲಭೂತ ಶಿಕ್ಷಣದ ಸಹಾಯಕ್ಕಾಗಿ 15 ಲಕ್ಷ, ವೃತ್ತಿಪರ ಅಧ್ಯಯನಕ್ಕೆ 5 ಲಕ್ಷ ರೂ. ಗಳನ್ನು ಮಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಎಲ್ಲಾ ಮಕ್ಕಳನ್ನೂ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಈ ಯೋಜನೆಯನ್ನು ಘೋಷಿಸಲಾಗಿದೆ. ಕುಟುಂಬದ ಆಧಾರ ಸ್ಥಂಬಗಳು ಜೈಲಿನಲ್ಲಿದ್ದಾಗ ಅವರ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದು. ಬಹುತೇಕ ಕಡೆಗಳಲ್ಲಿ ಇಂತಹದ್ದೇ ಘಟನೆಗಳು ನಡೆಯುತ್ತವೆ. ಪೋಷಕರು ಜೈಲಿನಲ್ಲಿದ್ದಾಗ ಮಕ್ಕಳ ಶಿಕ್ಷಣ ಥಟ್ಟನೆ ನಿಂತು ಹೋಗುತ್ತದೆ ಎಂದು ಅವರು ಹೇಳಿದರು.

ಇನ್ನೂ 1ರಿಂದ 5ನೇ ತರಗತಿ ಕಲಿಯುವ ಮಕ್ಕಳಿಗೆ ತಿಂಗಳಿಗೆ 300 ರೂ., 6ರಿಂದ 10ನೇ ತರಗತಿ ಕಲಿಯುವ ಮಕ್ಕಳಿಗೆ ತಿಂಗಳಿಗೆ 500 ರೂ., ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗೆ 750 ರೂ ಮತ್ತು ಪದವಿ ಹಾಗೂ ವೃತ್ತಿಪರ ಕೋರ್ಸ್ ಗಳನ್ನು ಕಲಿಯುವ ಮಕ್ಕಳಿಗೆ ತಿಂಗಳಿಗೆ 1000 ರೂಪಾಯಿಗಳನ್ನು ಸಾಮಾಜಿಕ ನ್ಯಾಯ ಇಲಾಖೆಯು ನೀಡಲಿದೆ.

ವಿವಿಧ ಕೋರ್ಸ್ ಗಳಿಗೆ ಶುಲ್ಕಗಳು ವಿಭಿನ್ನವಾಗಿರುವುದರಿಂದ ಪ್ರತಿ ವಿದ್ಯಾರ್ಥಿಗೂ ಗರಿಷ್ಠ 1 ಲಕ್ಷ ರೂಪಾಯಿಗಳವರೆಗೆ ಸರ್ಕಾರ ನೆರವು ನೀಡಲಿದೆ. ಜೈಲು ಅಧೀಕ್ಷಕರು ಈ ಸಹಾಯವನ್ನು ವಿತರಿಸಲಿದ್ದಾರೆ. ಕೇರಳ ರಾಜ್ಯದ 54 ಜೈಲುಗಳಲ್ಲಿ ಪ್ರಸ್ತುತ 6 ಸಾವಿರಕ್ಕೂ ಅಧಿಕ ಕೈದಿಗಳಿದ್ದಾರೆ. ಇವರ ಮಕ್ಕಳಿಗೆ ಈ ಯೋಜನೆ ತಲುಪಲಿದೆ.

ಇತ್ತೀಚಿನ ಸುದ್ದಿ

Exit mobile version