ಕೇರಳದಲ್ಲಿ ಯೋಧನನ್ನು ಅಪಹರಿಸಿ ಥಳಿತ: ಸೈನಿಕನ ಬೆನ್ನ ಮೇಲೆ ‘ಪಿಎಫ್ ಐ’ ಎಂದು ಬರೆದ ದುಷ್ಕರ್ಮಿಗಳು; ವೀಡಿಯೋ, ಫೋಟೋ ವೈರಲ್
ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಯೋಧನನ್ನು ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಅಪಹರಿಸಿ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸುಮಾರು ಆರು ಮಂದಿ ಆರೋಪಿತರು ಯೋಧನನ್ನು ಕಿಡ್ನ್ಯಾಪ್ ಮಾಡಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಥಳಿಸಿದ್ದಾರೆ. ಬಳಿಕ ಯೋಧನ ಬೆನ್ನಿನ ಮೇಲೆ ಹಸಿರು ಬಣ್ಣದಿಂದ ‘PFIʼ ಎಂದು ಬರೆದಿದ್ದಾರೆ. ಹಲ್ಲೆಗೊಳಗಾದ ಯೋಧನನ್ನು ಶೈನ್ ಕುಮಾರ್ ಎಂದು ಗುರುತಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ದೂರು ದಾಖಲಾಗಿದೆ. ಸುಮಾರು ಆರು ಮಂದಿ ತನ್ನನ್ನು ಅಪಹರಿಸಿದ್ದಾರೆ ಎಂದು ಯೋಧ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದಾಳಿಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ದೂರು ದಾಖಲಾಗಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಯಾವುದೇ ಬಂಧನವಾಗಿಲ್ಲ.
ಅಪಹರಣಕ್ಕೊಳಗಾಗಿ ಕಡಕ್ಕಲ್‌ನಲ್ಲಿರುವ ಯೋಧನ ಮನೆಯ ಬಳಿ ಇರುವ ಕಾಡಿಗೆ ಕರೆದೊಯ್ದು ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಆರು ಜನರು ಯೋಧನನ್ನು ಹಿಡಿದು ಅರಣ್ಯಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಅವರು ಯೋಧನಿಗೆ ಚಿತ್ರಹಿಂಸೆ ನೀಡಿದ್ದಾರೆ. ಅಲ್ಲದೇ ಯೋಧನ ಬೆನ್ನಿನ ಮೇಲೆ ಬಣ್ಣದಿಂದ ಪಿಎಫ್ಐ ಎಂದು ಬರೆಯಲಾಗಿದೆ ಎಂದು ವರದಿಯಾಗಿದೆ. ಯೋಧನ ಬೆನ್ನಿನ ಮೇಲೆ ಹಸಿರು ಬಣ್ಣದಲ್ಲಿ ಪಿಎಫ್ಐ ಅಕ್ಷರಗಳನ್ನು ಬರೆದಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ ತೋರಿಸಿರುವಂತೆ ಭಾರತೀಯ ಸೇನಾ ಜವಾನನ ಟಿ-ಶರ್ಟ್ ಹಿಂಭಾಗ ಹರಿದುಹೋಗಿದೆ. ಪಿಎಫ್ಐ ಎಂಬ ಅಕ್ಷರವನ್ನು ಬೆನ್ನಿನ ಮೇಲೆ ಹಸಿರು ಬಣ್ಣದಲ್ಲಿ ಬರೆಯಲಾಗಿದೆ.

























