ಕೊಲೆಗೀಡಾದ ಎಲ್ಲ ಯುವಕರ ತಾಯಂದಿರ ನೋವು ಒಂದೇ ಆಗಿದೆ: ಯು.ಟಿ.ಖಾದರ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಹತ್ಯೆಗಳು ನಡೆದಿದ್ದು, ಕೊಲೆಗೀಡಾದ ಯುವಕರ ತಾಯಂದಿರ ನೋವು ಒಂದೇ ಆಗಿದೆ. ಆದರೆ ರಾಜ್ಯದ ಮುಖ್ಯಮಂತ್ರಿ ಹಾಗೂ ಸರಕಾರದ ಜನಪ್ರತಿನಿಧಿಗಳು ಕೇವಲ ಒಂದು ಕುಟುಂಬವನ್ನು ಭೇಟಿ ನೀಡಿ ಸಾಂತ್ವಾನ ಹೇಳಿ ಪರಿಹಾರ ನೀಡಿದ್ದು, ಸರಕಾರದ ತಾರತಮ್ಯ ನೀತಿಯಾಗಿದ್ದು, ಇದರ ವಿರುದ್ಧ ಕಾಂಗ್ರೆಸ್ ಕಾನೂನು ಹೋರಾಟ ಮಾಡುವುದಾಗಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದರು.
ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಕಳೆದ ಹತ್ತು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳು ಆತಂಕಕಾರಿಯಾಗಿದ್ದು, ರಾಜ್ಯ ಸರಕಾರಕ್ಕೆ ನಿಜವಾಗಿಯೂ ಕೋಮು ಸಂಘರ್ಷ ನಿಯಂತ್ರಣ ತರಬೇಕೆಂಬ ಇಚ್ಛೆಯಿದ್ದರೆ ಸುಗ್ರೀವಾಜ್ಞೆ ಮೂಲಕ ಕೋಮುಗಲಭೆ ನಿಯಂತ್ರಣ ಕಾಯಿದೆ ತರಲಿ ಎಂದು ಹೇಳಿದರು.
ರಾಜ್ಯ ಸರಕಾರ ಲವ್ ಜಿಹಾದ್, ಕೃಷಿ ಕಾಯಿದೆ ಸೇರಿದಂತೆ ನಾನಾ ಕಾಯಿದೆಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದೆ. ಈ ರಾಜ್ಯದಲ್ಲಿ ಪರಸ್ಪರ ಸಾಮರಸ್ಯ ಬದುಕು ಅಗತ್ಯವಾಗಿದ್ದು, ಕೋಮು ಸಂಘರ್ಷವನ್ನು ನಿಯಂತ್ರಣ ಅನಿವಾರ್ಯತೆಯಿದೆ. ಕೋಮು ಗಲಭೆಗಳ ಆರೋಪಿಗಳಿಗೆ ಸಂಬಂಧಿಸಿ ಬುಲ್ಡೋಜರ್, ಎನ್ ಕೌಂಟರ್, ಆಸ್ತಿ ಮುಟ್ಟುಗೋಲು ಎಂಬಿತ್ಯಾದಿ ಹೇಳಿಕೆಗಳನ್ನು ನೀಡುವ ಜವಾಬ್ಧಾರಿಯುತ ಸ್ಥಾನದಲ್ಲಿರುವ ಸಚಿವರು, ಶಾಸಕರು ಅದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಿ. ಅದು ಬಿಟ್ಟು ಕೇವಲ ಹೇಳಿಕೆಗಳನ್ನು ನೀಡಿ ಜನರನ್ನು ದಿಕ್ಕು ತಪ್ಪಿಸುವುದು ಯಾಕೆ. ಈ ಕುರಿತಾದ ಕಾಯ್ದೆ ಜಾರಿಗೊಳಿಸಲಿ. ಈ ಜಿಲ್ಲೆಯ ಅಭಿವೃದ್ಧಿ, ಸುರಕ್ಷತೆ ದೃಷ್ಟಿಯಿಂದ ಆ ಕಾಯಿದೆಯ ಅಗತ್ಯವಿದೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

























