ದೇಗುಲದ ಮುಂಭಾಗದ ಕಟ್ಟೆ ಮೇಲೆ ಕುಳಿತಿದ್ದಕ್ಕೆ ದಲಿತ ಯುವಕರ ಮೇಲೆ ಹಲ್ಲೆ!
ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಯಂಪಾಡ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ದೇವಸ್ಥಾನದ ಮುಂಭಾಗದ ಕಟ್ಟೆಯ ಮೇಲೆ ಕುಳಿತಿದ್ದ ಕಾರಣಕ್ಕಾಗಿ ಪರಿಶಿಷ್ಟ ಸಮುದಾಯದ ಯುವಕರ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ತಾಲೂಕಿನ ಎಂ.ಟಿ.ಪಳ್ಳಿ ಗ್ರಾಮದ ದಂಪತಿಗಳಾದ ಪೋಷಪ್ಪ ಮತ್ತು ಅನಂತಮ್ಮ ಅವರ ಪುತ್ರ ಮಹಾಂತೇಶ ಎಂಬ ಮಗುವಿನ ಜವಳ ಕಾರ್ಯಕ್ರಮವನ್ನು ಯಂಪಾಡ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಗಾಜರಕೋಟ ಗ್ರಾಮದ ಅನಿಲ್ಕುಮಾರ ಬೇನಳ್ಳಿ ಎಂಬ ಯುವಕ ದೇವಸ್ಥಾನದ ಮುಂಭಾಗದ ಕಟ್ಟೆಯ ಮೇಲೆ ಕುಳಿತಿದ್ದರು.
ಇದನ್ನು ಗಮನಿಸಿದ ಗ್ರಾಮದ ಕೆಲವರು, “ಇಲ್ಲಿ ಕುಳಿತುಕೊಳ್ಳಬಾರದು” ಎಂದು ಆಕ್ಷೇಪ ವ್ಯಕ್ತಪಡಿಸಿ ಅನಿಲ್ ಕುಮಾರ ಅವರನ್ನು ಕೆಳಗಿಳಿಸಲು ಯತ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅನಿಲ್ಕುಮಾರ, “ಜಾತಿಯ ಹೆಸರಿನಲ್ಲಿ ಇಂತಹ ಭೇದಭಾವ ಮಾಡಬಾರದು” ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಲಕ್ಷ್ಮಣ ಕಾಳಪ್ಪ, ಅನಂತಪ್ಪ ಹಣಮಂತ, ರಮೇಶ ಸಾಬಣ್ಣ ಸೇರಿದಂತೆ ಮತ್ತಿತರರು ಅನಿಲ್ಕುಮಾರ ಮತ್ತು ಅವರ ಜೊತೆಗಿದ್ದವರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ದೇವಸ್ಥಾನದ ಬಳಿ ಇದ್ದ ಬಡಿಗೆ ಹಾಗೂ ಪ್ಲಾಸ್ಟಿಕ್ ಪೈಪ್ ಗಳಿಂದ ಮನಬಂದಂತೆ ಹಲ್ಲೆ ನಡೆಸಲಾಗಿದ್ದು, ಘಟನೆಯಲ್ಲಿ ಅನಿಲ್ಕುಮಾರ ಅವರ ತಲೆಗೆ ಗಂಭೀರ ಗಾಯಗಳಾಗಿವೆ. ಉಳಿದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹಲ್ಲೆ ನಡೆಸುತ್ತಿರುವ ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಪೊಲೀಸರನ್ನು ಕಳುಹಿಸಿ ತನಿಖೆ ನಡೆಸುವಂತೆ ಮತ್ತು ಶಾಂತಿ ಕಾಪಾಡುವಂತೆ ಸೂಚಿಸಿದ್ದಾರೆ. ಗುರುಮಠಕಲ್ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಈ ಘಟನೆಯು ಜಿಲ್ಲಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ದಲಿತ ಸಂಘಟನೆಗಳು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























