ಗೃಹ ಜ್ಯೋತಿ ಮರುಪರಿಶೀಲನೆ ಆರಂಭ: ಇಂದಿನಿಂದ ಮನೆ ಮನೆಗೆ ಎಸ್ಕಾಂ ಸಿಬ್ಬಂದಿ; ಜುಲೈನಲ್ಲಿ ಗ್ರಾಹಕರಿಗೆ ಸಿಗಲಿದೆ ‘ಸರಾಸರಿ ಬಿಲ್’!
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹ ಜ್ಯೋತಿ’ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಕಾರ್ಯ ಇಂದಿನಿಂದ (ಜುಲೈ 1) ಅಧಿಕೃತವಾಗಿ ಆರಂಭವಾಗಿದೆ. ಯೋಜನೆಯಲ್ಲಿ ಪಾರದರ್ಶಕತೆ ತರಲು ಸರ್ಕಾರ ಈ ಪುನರ್ ಪರಿಶೀಲನಾ ಪ್ರಕ್ರಿಯೆಗೆ ಆದೇಶಿಸಿದ್ದು, ಬೆಸ್ಕಾಂ ಸೇರಿದಂತೆ ರಾಜ್ಯದ ಎಲ್ಲಾ 5 ಎಸ್ಕಾಂಗಳ (ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ, ಸೆಸ್ಕ್) ಮೀಟರ್ ರೀಡರ್ಗಳು ಹಾಗೂ ಸಿಬ್ಬಂದಿ ಗ್ರಾಹಕರ ಮನೆಗಳಿಗೆ ಭೇಟಿ ನೀಡಲಿದ್ದಾರೆ.
ಸಿಬ್ಬಂದಿಯು ಮೊಬೈಲ್ ಆ್ಯಪ್ ಹಾಗೂ ಘೋಷಣಾ ಪತ್ರದ ಮೂಲಕ ಸ್ಥಳದಲ್ಲೇ ಮಾಹಿತಿ ಸಂಗ್ರಹಿಸಿ, ಅರ್ಜಿ ಭರ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ. ಈ ಪ್ರಕ್ರಿಯೆಗೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ಇಂಧನ ಇಲಾಖೆ ಮನವಿ ಮಾಡಿದೆ.
ಪರಿಶೀಲನೆಗೆ ಯಾವೆಲ್ಲಾ ದಾಖಲೆಗಳು ಬೇಕು?
- ಆಧಾರ್ ಕಾರ್ಡ್
- ಫಲಾನುಭವಿಯ ಪಾಸ್ ಪೋರ್ಟ್ ಅಳತೆಯ ಫೋಟೋ
- ಮತದಾರರ ಗುರುತಿನ ಚೀಟಿ (ವೋಟರ್ ಐಡಿ)
- ಪಾನ್ ಕಾರ್ಡ್
- ರೇಷನ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಬಾಡಿಗೆ ಒಪ್ಪಂದದ ಪತ್ರಗಳು (ಬಾಡಿಗೆದಾರರಿಗೆ ಮಾತ್ರ ಅನ್ವಯ)
ಸಿಬ್ಬಂದಿ ಏನೆಲ್ಲಾ ಮಾಹಿತಿ ಸಂಗ್ರಹಿಸುತ್ತಾರೆ?
- ಪಡಿತರ ಚೀಟಿ ವಿವರ: ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಹೊಂದಿದ್ದಾರೆಯೇ? ಬಿಪಿಎಲ್ ಆಗಿದ್ದರೆ ಕಾರ್ಡ್ ಸಂಖ್ಯೆ.
- ಮತದಾರರ ವಿವರ: ಕರ್ನಾಟಕದ ನೋಂದಾಯಿತ ಮತದಾರರೇ ಹೌದೇ? ಹೌದಾದರೆ EPIC ಸಂಖ್ಯೆ.
- ಅರ್ಜಿದಾರರ ವಿವರ: ಭಾವಚಿತ್ರ ಹಾಗೂ ಅವರ ಸಾಮಾಜಿಕ ವರ್ಗ (ಎಸ್ ಸಿ / ಎಸ್ ಟಿ / ಒಬಿಸಿ / ಅಲ್ಪಸಂಖ್ಯಾತ / ಇತರೆ).
- ಆದಾಯ ತೆರಿಗೆ ವಿವರ: ಆದಾಯ ತೆರಿಗೆ ಪಾವತಿದಾರರೇ ಹೌದೇ? ಹೌದಾದರೆ ಪಾನ್ (PAN) ಸಂಖ್ಯೆ.
- ವೃತ್ತಿ: ಸರ್ಕಾರಿ / ಖಾಸಗಿ / ವ್ಯಾಪಾರ / ಕೂಲಿ ಕಾರ್ಮಿಕ ಮತ್ತು ಇತ್ಯಾದಿ ವಿವರ.
ಗಮನಿಸಿ: ಈ ಯೋಜನೆಯು ಕೇವಲ ಗೃಹ ಬಳಕೆದಾರರಿಗೆ ಹಾಗೂ ಕರ್ನಾಟಕದ ನಿವಾಸಿಗಳಿಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ಮಳಿಗೆಗಳಿಗೆ ಇದು ಅನ್ವಯಿಸುವುದಿಲ್ಲ. ಅಲ್ಲದೆ, ಒಂದು ಆಧಾರ್ ಕಾರ್ಡ್ ಸಂಖ್ಯೆಗೆ ಕೇವಲ ಒಂದು ಮೀಟರ್ಗೆ ಮಾತ್ರ ರಿಯಾಯಿತಿ ಸಿಗುತ್ತದೆ.
ಉಚಿತ ವಿದ್ಯುತ್ ಲೆಕ್ಕಾಚಾರ ಹೇಗೆ?
ಪ್ರತಿ ತಿಂಗಳೂ ನೇರವಾಗಿ 200 ಯೂನಿಟ್ ಉಚಿತವಾಗಿ ಸಿಗುವುದಿಲ್ಲ. ನಿಮ್ಮ 2022–23ರ ವರ್ಷದ ಸರಾಸರಿ ವಿದ್ಯುತ್ ಬಳಕೆಗೆ ಹೆಚ್ಚುವರಿ ಶೇಕಡಾ 10 ರಷ್ಟು ಯೂನಿಟ್ ಗಳನ್ನು ಸೇರಿಸಿ ನಿಮ್ಮ ಮಾಸಿಕ ಉಚಿತ ಮಿತಿಯನ್ನು ನಿಗದಿಪಡಿಸಲಾಗುತ್ತದೆ. ಉದಾಹರಣೆಗೆ, ನಿಮ್ಮ ಸರಾಸರಿ ಬಳಕೆ 100 ಯೂನಿಟ್ ಆಗಿದ್ದರೆ, ನಿಮಗೆ 110 ಯೂನಿಟ್ ವರೆಗೆ ಉಚಿತ ವಿದ್ಯುತ್ ಸಿಗುತ್ತದೆ. ಆದರೆ, ಯಾವುದೇ ತಿಂಗಳು ನಿಮ್ಮ ಒಟ್ಟು ಬಳಕೆ 200 ಯೂನಿಟ್ ಗಿಂತ ಹೆಚ್ಚಾದರೆ, ನೀವು ಸಂಪೂರ್ಣ ಬಿಲ್ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಜುಲೈ ತಿಂಗಳಲ್ಲಿ ಸಿಗಲಿದೆ ‘ಸರಾಸರಿ ಬಿಲ್’!
ಮನೆ ಮನೆ ಪರಿಶೀಲನಾ ಕಾರ್ಯಕ್ಕೆ ಮೀಟರ್ ರೀಡರ್ಗಳನ್ನು ನಿಯೋಜಿಸಿರುವುದರಿಂದ, ಜುಲೈ ತಿಂಗಳಿನಲ್ಲಿ ನಿಯಮಿತ ಮೀಟರ್ ರೀಡಿಂಗ್ ಇರುವುದಿಲ್ಲ. ಬದಲಿಗೆ, ಗ್ರಾಹಕರಿಗೆ ಕಳೆದ ಮೂರು ತಿಂಗಳ ಬಳಕೆಯ ಆಧಾರದ ಮೇಲೆ ‘ಸರಾಸರಿ ಬಿಲ್’ ನೀಡಲಾಗುತ್ತದೆ.
ಈ ಬಿಲ್ ಗಳನ್ನು ಗ್ರಾಹಕರಿಗೆ ಎಸ್ ಎಂಎಸ್ ಮತ್ತು ಇಮೇಲ್ ಮೂಲಕ ಕಳುಹಿಸಲಾಗುವುದು. ಆಗಸ್ಟ್ ತಿಂಗಳಿನಿಂದ ಎಂದಿನಂತೆ ನೈಜ ಬಳಕೆಯ ಆಧಾರದ ಮೇಲೆಯೇ ಬಿಲ್ ಬರಲಿದ್ದು, ಜುಲೈ ತಿಂಗಳ ಬಿಲ್ಲಿಂಗ್ನಲ್ಲಿ ಏನಾದರೂ ವ್ಯತ್ಯಾಸಗಳಾಗಿದ್ದರೆ ಅದನ್ನು ಮುಂದಿನ ಬಿಲ್ ನಲ್ಲಿ ಸೂಕ್ತವಾಗಿ ಹೊಂದಾಣಿಕೆ ಮಾಡಲಾಗುವುದು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























