ಒಬ್ಬರನ್ನು ಹಿಂದೆ ಹಾಕಿಯೇ ಮತ್ತೊಬ್ಬರು ಬರಬೇಕು, ಅದು ರಾಜಕೀಯ ಸಿದ್ಧಾಂತ: ಸಚಿವ ಸತೀಶ್ ಜಾರಕಿಹೊಳಿ

sathish jarakiholi.jpg
29/06/2026

ಬೆಂಗಳೂರು: “ರಾಜಕಾರಣದಲ್ಲಿ ಒಬ್ಬರನ್ನು ಹಿಂದೆ ಹಾಕಿಯೇ ಮತ್ತೊಬ್ಬರು ಮುಂದೆ ಬರಬೇಕು. ಅದುವೇ ರಾಜಕೀಯ ಸಿದ್ಧಾಂತ,” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾರ್ಮಿಕವಾಗಿ ನುಡಿದಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರನ್ನು ಕಡೆಗಣಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಮುಕ್ತವಾಗಿ ಮಾತನಾಡಿದರು.
“ಇದು ಅತ್ಯಂತ ವೇಗವಾಗಿರುವ ಕಾಲ. ನಾವು ಆ ಸ್ಪೀಡ್ಗೆ ತಕ್ಕಂತೆ ಓಡಬೇಕು. ರಾಜಕಾರಣದಲ್ಲಿ ಓಡದೇ ಇದ್ದರೆ ಟ್ರೇನ್ ಮಿಸ್ ಆಗುತ್ತದೆ. ಒಂದು ವೇಳೆ ರೈಲು ಮಿಸ್ ಆದರೆ, ತುಮಕೂರಿಗೋ ಅಥವಾ ಅರಸೀಕೆರೆಗೋ ಗಾಡಿಯಲ್ಲಿ ಹೋಗಿಯಾದರೂ ರೈಲನ್ನು ಹಿಡಿಯಬೇಕು. ರೈಲು ಹಿಡಿಯದೇ ಹೋದರೆ ಜನರೇ ನಮ್ಮನ್ನು ಮರೆತುಬಿಡುತ್ತಾರೆ. ಇದು ನಾನು ಹೇಳುತ್ತಿರುವುದಲ್ಲ, ಜನರೇ ಹೇಳುವ ಮಾತು,” ಎಂದು ಹೇಳಿದರು.

ನಾನು ದೊಡ್ಡ ಲೀಡರ್ ಎಂದರೆ ರಾಜಕೀಯದಲ್ಲಿ ನಡೆಯುವುದಿಲ್ಲ, ಕಾಲಕ್ಕೆ ತಕ್ಕಂತೆ ಬದಲಾವಣೆ ಆಗುತ್ತಾ ಹೋಗುತ್ತದೆ. ಕಳೆದ 20 ವರ್ಷಗಳಲ್ಲಿ ನಾನು ನೋಡಿರುವ ಹಲವು ನಾಯಕರು ಈಗ ಇಲ್ಲ. ಅವರು ಓಡಿ ಹೋಗಿ ಹತ್ತಿದ್ದರೆ ಇನ್ನು ಇರುತ್ತಿದ್ದರು. ಜನರ ಸಂಪರ್ಕ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಮಾತ್ರ ಲೀಡರ್ ಎಂದು ಜಾರಕಿಹೊಳಿ ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯ ಅವರ ವೇಗ ಏಕೆ ಕಡಿಮೆಯಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಅದನ್ನು ಅವರನ್ನೇ ಕೇಳಬೇಕು. ಆದರೆ ನಾವು ಅವರಿಗೆ ಓಡಬೇಕು ಅಂತಲೇ ಹೇಳುತ್ತೇವೆ. ರಾಜಕೀಯದಲ್ಲಿ ಓಡದಿದ್ದರೆ ಕೆಲಸ ಆಗುವುದಿಲ್ಲ. ಯಾರು ಫೈಟ್ ಮಾಡುತ್ತಾರೋ ಅವರು ಮಾತ್ರ ಉಳಿಯುತ್ತಾರೆ. ಇಲ್ಲದಿದ್ದರೆ ಜನ ಹೊಸ ನಾಯಕನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ,” ಎಂದರು.

ಇದೇ ವೇಳೆ, “ಜನರ ಹೃದಯ ಸಿಂಹಾಸನ ಶಾಶ್ವತ” ಎಂದು ಸಿದ್ದರಾಮಯ್ಯ ಹೇಳಿರುವುದು ಸರಿಯಾಗಿದೆ. ಸಿಎಂ ಸ್ಥಾನ ಅಥವಾ ಅಧಿಕಾರ ಯಾವುದೂ ಶಾಶ್ವತವಲ್ಲ, ಜನರ ಬೆಂಬಲ ಮತ್ತು ಸಂಪರ್ಕ ಮಾತ್ರ ಶಾಶ್ವತ ಎಂದರು.

ಇಡಿ ದಾಳಿ ಮತ್ತು ಬಿಡದಿ ಟೌನ್ ಶಿಪ್ ವಿವಾದ:

ರಾಜ್ಯದಲ್ಲಿ ನಡೆಯುತ್ತಿರುವ ಇಡಿ (ED) ದಾಳಿಗಳ ಕುರಿತು ಮಾತನಾಡಿದ ಅವರು, “ನಮ್ಮನ್ನೇ ಟಾರ್ಗೆಟ್ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಇದು ರಾಜಕೀಯ ಉದ್ದೇಶದಿಂದ ಕೂಡಿದೆಯೇ ಎಂದು ತಿಳಿಯಲು ಸ್ವಲ್ಪ ಸಮಯ ಬೇಕು. ಒಂದು ವೇಳೆ ರಾಜಕೀಯ ಪ್ರೇರಿತ ದಾಳಿಯಾಗಿದ್ದರೆ ಕಾನೂನು ಹೋರಾಟ ನಡೆಸಬೇಕಾಗುತ್ತದೆ,” ಎಂದರು.

ಇನ್ನು ಬಿಡದಿ ಟೌನ್ಶಿಪ್ ವಿಚಾರವಾಗಿ ರೈತರು ಹಾಗೂ ಬಿಜೆಪಿ-ಜೆಡಿಎಸ್ ನಾಯಕರು ನಡೆಸುತ್ತಿರುವ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿ, “ಈ ವಿಷಯದ ಬಗ್ಗೆ ಹೈಕಮಾಂಡ್ ಹಾಗೂ ಸಿಎಂ ಅವರಿಗೆ ಸಂಪೂರ್ಣ ಅರಿವಿದೆ. ಈ ಬಗ್ಗೆ ಶೀಘ್ರದಲ್ಲೇ ಚರ್ಚೆ ನಡೆಸಲಿದ್ದೇವೆ ಮತ್ತು ನಮ್ಮ ಅಭಿಪ್ರಾಯವನ್ನೂ ಹಂಚಿಕೊಳ್ಳಲಿದ್ದೇವೆ,” ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ

Exit mobile version