ಚಿಕ್ಕಮಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ಮೂರು ತಿಂಗಳ ಹಸುಗೂಸು ಬಲಿ; ಪೋಷಕರ ತೀವ್ರ ಆಕ್ರೋಶ

chikkamagaluru
27/06/2026

ಚಿಕ್ಕಮಗಳೂರು: ಜಿಲ್ಲಾ ಸರ್ಕಾರಿ ಹೆರಿಗೆ ಆಸ್ಪತ್ರೆಯ ವೈದ್ಯರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದಿಂದಾಗಿ ಕೇವಲ ಮೂರು ತಿಂಗಳ ಹಸುಗೂಸೊಂದು ಸಾವನ್ನಪ್ಪಿರುವ ಗಂಭೀರ ಆರೋಪ ಕೇಳಿಬಂದಿದೆ. ವೈದ್ಯರ ಈ ನಡೆಗೆ ಮಗುವಿನ ಹೆತ್ತವರು ಹಾಗೂ ಕುಟುಂಬಸ್ಥರು ಆಸ್ಪತ್ರೆ ಎದುರು ಆಕ್ರಂದನ ಮುಗಿಲು ಮುಟ್ಟಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ನಗರದ ಅರವಿಂದ ನಗರದ ನಿವಾಸಿಗಳಾದ ರವೀಶ್ ಹಾಗೂ ತೇಜಸ್ವಿನಿ ದಂಪತಿಯ 3 ತಿಂಗಳ ಮಗುವಿಗೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ನಿನ್ನೆ ಪೋಷಕರು ನಗರದ ಸರ್ಕಾರಿ ಜಿಲ್ಲಾ ಹೆರಿಗೆ ಆಸ್ಪತ್ರೆಗೆ ದಾಖಲಿಸಿದ್ದರು. ಮಗುವನ್ನು ಪರೀಕ್ಷಿಸಿದ ವೈದ್ಯರು, ಮಗುವಿಗೆ ರಕ್ತದ ಕೊರತೆ (ರಕ್ತ ಕಡಿಮೆ) ಇದೆ ಎಂದು ಹೇಳಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು.

ಆದರೆ, ಪ್ರಾಥಮಿಕ ಚಿಕಿತ್ಸೆಯ ನಂತರ ಇಂದು ಮುಂಜಾನೆ ಮಗುವಿನ ಆರೋಗ್ಯವನ್ನು ಮರುಪರಿಶೀಲಿಸಿದ ವೈದ್ಯರು, “ಈಗ ಮಗು ಚೆನ್ನಾಗಿದೆ, ಯಾವುದೇ ತೊಂದರೆ ಇಲ್ಲ” ಎಂದು ಪೋಷಕರಿಗೆ ಭರವಸೆ ನೀಡಿದ್ದರು. ವೈದ್ಯರ ಮಾತನ್ನು ನಂಬಿದ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದರು.

ಬೆಳಗ್ಗೆಯಷ್ಟೇ ಮಗು ಚೆನ್ನಾಗಿದೆ ಎಂದಿದ್ದ ವೈದ್ಯರು, ದಿಢೀರನೆ ಬೆಳಗ್ಗೆ 11 ಗಂಟೆಯ ಸುಮಾರಿಗೆ “ಇಲ್ಲಿ ಚಿಕಿತ್ಸೆ ನೀಡಲು ಆಗುವುದಿಲ್ಲ, ತಕ್ಷಣ ಹಾಸನಕ್ಕೆ ಕರೆದೊಯ್ಯಿರಿ” ಎಂದು ಕೈಚೆಲ್ಲಿದ್ದಾರೆ. ವೈದ್ಯರ ತುರ್ತು ಸೂಚನೆಯ ಮೇರೆಗೆ ಆತಂಕಗೊಂಡ ಪೋಷಕರು ಮಗುವನ್ನು ಹಾಸನಕ್ಕೆ ಕರೆದೊಯ್ಯುತ್ತಿದ್ದರು. ಆದರೆ, ಚಿಕ್ಕಮಗಳೂರಿನಿಂದ ಹಾಸನಕ್ಕೆ ಹೋಗುವ ಮಾರ್ಗಮಧ್ಯೆ ಬೇಲೂರು ತಲುಪುತ್ತಿದ್ದಂತೆ ಮಗು ತೀವ್ರ ಸುಸ್ತಾಗಿ ಕೊನೆಯುಸಿರೆಳೆದಿದೆ.

ಸಕಾಲದಲ್ಲಿ ಸರಿಯಾದ ಚಿಕಿತ್ಸೆ ನೀಡದೆ, ಮಗು ಚೆನ್ನಾಗಿದೆ ಎಂದು ಹೇಳಿ ಕೊನೆ ಕ್ಷಣದಲ್ಲಿ ಬೇರೆ ಆಸ್ಪತ್ರೆಗೆ ರೆಫರ್ ಮಾಡಿದ ವೈದ್ಯರ ನಿರ್ಲಕ್ಷ್ಯವೇ ಕಂದಮ್ಮನ ಸಾವಿಗೆ ನೇರ ಕಾರಣ ಎಂದು ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ. ಸದ್ಯ ಸರ್ಕಾರಿ ಹೆರಿಗೆ ಆಸ್ಪತ್ರೆ ಬಳಿ ಜಮಾಯಿಸಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಕರ್ತವ್ಯ ಲೋಪ ಎಸಗಿದ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version