ಯುವತಿಗೆ ಇರಿದು ಕಾರಿನಲ್ಲೇ ಬಾಂಬ್ ಬ್ಲಾಸ್ಟ್ ಮಾಡಿದ ಯುವಕ ಸಜೀವ ದಹನ: ಇಬ್ಬರಿಗೆ ಗಾಯ

tumakuru
27/06/2026

ತುಮಕೂರು: ಜಿಲ್ಲೆಯ ಸಿರಾ ತಾಲೂಕಿನ ಜೋಗಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಚಲಿಸುತ್ತಿದ್ದ ಕಾರೊಂದು ಭೀಕರವಾಗಿ ಸ್ಫೋಟಗೊಂಡಿದ್ದು, ಓರ್ವ ಯುವಕ ಸ್ಥಳದಲ್ಲೇ ಸಜೀವ ದಹನವಾಗಿರುವ ಘಟನೆ ಶನಿವಾರ ನಡೆದಿದೆ.

ಬೆಂಗಳೂರು ಮೂಲದ ನಾಗೇಂದ್ರ (30) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಓರ್ವ ಯುವತಿ ಹಾಗೂ ಕಾರು ಚಾಲಕ ಪ್ರವೀಣ್ ತೀವ್ರವಾಗಿ ಗಾಯಗೊಂಡಿದ್ದು, ಇಬ್ಬರನ್ನೂ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಾಹಿತಿ ಪ್ರಕಾರ, ನಾಗೇಂದ್ರ ಹಾಗೂ ಯುವತಿ ಬೆಂಗಳೂರಿನಿಂದ ಅಂಕೋಲಕ್ಕೆ ಹೋಗಲು ಉಬರ್ (Uber) ಮೂಲಕ ಕಾರು ಬುಕ್ ಮಾಡಿದ್ದರು. ಕಾರು ಚಲಿಸುತ್ತಿದ್ದಾಗ ಚಾಲಕ ಪ್ರವೀಣ್‌ ಗೆ ಬೆಂಗಳೂರಿನ ಪಿಎಸ್ ​ಐ (PSI) ಕಡೆಯಿಂದ ಫೋನ್ ಬಂದಿತ್ತು. ಚಾಲಕನು ಫೋನ್ ಅನ್ನು ಕಾರಿನಲ್ಲಿದ್ದ ನಾಗೇಂದ್ರನಿಗೆ ನೀಡಿದ್ದಾನೆ. ಈ ವೇಳೆ ಇದ್ದಕ್ಕಿದ್ದಂತೆ ನಾಗೇಂದ್ರ ತನ್ನ ಜೊತೆಯಲ್ಲಿದ್ದ ಯುವತಿಗೆ ಚೂರಿಯಿಂದ ಇರಿಯಲು ಪ್ರಾರಂಭಿಸಿದ್ದಾನೆ.

ಆಗ ತೀವ್ರ ಆತಂಕಕ್ಕೊಳಗಾದ ಯುವತಿ, “ಈತನ ಬಳಿ ಬಾಂಬ್ ಇದೆ, ನನಗೆ ತುಂಬಾ ಹಿಂಸೆ ನೀಡಿದ್ದಾನೆ” ಎಂದು ಜೋರಾಗಿ ಕೂಗಿಕೊಂಡಿದ್ದಾಳೆ. ತಕ್ಷಣವೇ ಚಾಲಕ ಪ್ರವೀಣ್ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿದ್ದಾನೆ. ಚಾಲಕ ಮತ್ತು ಚಾಕು ಇರಿತದಿಂದ ಗಾಯಗೊಂಡಿದ್ದ ಯುವತಿ ತಕ್ಷಣವೇ ಕಾರಿನಿಂದ ಹೊರಗೆ ಓಡಿ ಬಂದಿದ್ದಾರೆ. ಇವರಿಬ್ಬರು ಹೊರಬರುತ್ತಿದ್ದಂತೆ ಕಾರಿನಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಕಾರಿನೊಳಗಿದ್ದ ನಾಗೇಂದ್ರ ಸಜೀವ ದಹನವಾಗಿದ್ದಾನೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಸ್ಫೋಟಗೊಂಡು ಹೊತ್ತಿ ಉರಿದ ಕಾರಣ, ಹೆದ್ದಾರಿಯಲ್ಲಿ ಸುಮಾರು ಒಂದು ಕಿಲೋ ಮೀಟರ್‌ ಗಿಂತಲೂ ಹೆಚ್ಚು ದೂರ ವಾಹನ ಸಂಚಾರ ಸ್ಥಗಿತಗೊಂಡು ಟ್ರಾಫಿಕ್  ಜಾಮ್ ಉಂಟಾಗಿತ್ತು. ಘಟನಾ ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆಯ ಬಳಿಕವಷ್ಟೇ ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದು ತಿಳಿಯಬೇಕಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version