ಸ್ನೇಹಿತನ ಜೊತೆ ಕಾಡಿನಲ್ಲಿ ಕುಳಿತಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: 11 ಕಾಮುಕರು ಅರೆಸ್ಟ್

police
30/06/2026

ನಾಸಿಕ್: ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಜಮ್ನೇರ್ ತಾಲೂಕಿನ ಫತ್ತೇಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಮಾನವೀಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 11 ಜನರನ್ನು ಬಂಧಿಸಿದ್ದು, ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ.

ಜೂನ್ 2 ರಂದು 40 ವರ್ಷದ ಮಹಿಳೆಯೊಬ್ಬರು ತಮ್ಮ ಪುರುಷ ಸ್ನೇಹಿತನೊಂದಿಗೆ ಕಾಡಿನಲ್ಲಿ ಕುಳಿತಿದ್ದಾಗ ಈ ಘಟನೆ ನಡೆದಿದೆ. ಅದೇ ಸಮಯದಲ್ಲಿ ಕಟ್ಟಿಗೆ ಆರಿಸಲು ಕಾಡಿನ ಮೂಲಕ ಹಾದು ಹೋಗುತ್ತಿದ್ದ 14 ರಿಂದ 15 ಜನರ ಗುಂಪೊಂದು ಇವರ ಬಳಿ ಬಂದಿದೆ. ಇವರೆಲ್ಲರೂ ಪಕ್ಕದ ಗ್ರಾಮದವರಾಗಿದ್ದು, ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಪರಸ್ಪರ ಪರಿಚಿತರಾಗಿದ್ದರು.

ಆರೋಪಿಗಳು ಮಹಿಳೆಗೆ ಬೆದರಿಕೆ ಹಾಕಿದ್ದು, ಅವರಲ್ಲಿ ಇಬ್ಬರು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇನ್ನುಳಿದವರು ಈ ಕೃತ್ಯವನ್ನು ಮೊಬೈಲ್‌ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ.

ಮರ್ಯಾದೆಗೆ ಅಂಜಿ ಸಂತ್ರಸ್ತೆ ಆರಂಭದಲ್ಲಿ ಈ ವಿಷಯವನ್ನು ಯಾರೊಂದಿಗೂ ಹಂಚಿಕೊಂಡಿರಲಿಲ್ಲ. ಆದರೆ ಜೂನ್ 25 ರಂದು ಆರೋಪಿಗಳಲ್ಲೊಬ್ಬ ಈ ಅತ್ಯಾಚಾರದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಅದು ವೈರಲ್ ಆಗಿದೆ. ವಿಡಿಯೋ ಹರಿದಾಡುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆ ಸಂತ್ರಸ್ತೆ ಸೋಮವಾರ ಫತ್ತೇಪುರ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಒಟ್ಟು 14 ಜನರನ್ನು ವಶಕ್ಕೆ ಪಡೆದಿದ್ದಾರೆ. ಜಲಗಾಂವ್ ಎಸ್‌ಪಿ ಶ್ರೀಕಾಂತ್ ಧಿವಾರೆ ಅವರ ಪ್ರಕಾರ, ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯಡಿ ಒಟ್ಟು 15 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸದ್ಯ ಬಂಧಿತ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಕೋರಿ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version