ಮಂಗಳೂರು: ಉದ್ಯಮಿಯ ಪತ್ನಿ, ಮಗನ ಕಿಡ್ನಾಪ್; ಕಾರು ಮತ್ತು 180 ಗ್ರಾಂ ಚಿನ್ನ ದೋಚಿ ಪರಾರಿಯಾದ ಗ್ಯಾಂಗ್!
ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ, ಅವರ ಪತ್ನಿ ಮತ್ತು ಮಗನನ್ನು ಅಪಹರಿಸಿ, ಬಳಿಕ 180 ಗ್ರಾಂ ಚಿನ್ನಾಭರಣ ಹಾಗೂ ಕಾರಿನೊಂದಿಗೆ ದರೋಡೆಕೋರರ ತಂಡವೊಂದು ಪರಾರಿಯಾಗಿರುವ ಆಘಾತಕಾರಿ ಘಟನೆ ಸೋಮವಾರ (ಜೂನ್ 29) ಮುಂಜಾನೆ ಬೈಕಂಪಾಡಿ ಬಳಿ ನಡೆದಿದೆ.
ಸ್ಥಳೀಯ ವರದಿಗಳ ಪ್ರಕಾರ, ಕೇರಳದ ಪಯ್ಯನ್ನೂರು ನಿವಾಸಿಯಾದ ವಿಕಾಸ್ (42) ಎಂಬುವವರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜ್ಯುವೆಲ್ಲರಿ ಶಾಪ್ ನಡೆಸುತ್ತಿದ್ದಾರೆ. ಸೋಮವಾರ ಮುಂಜಾನೆ ಸುಮಾರು 2:15 ರ ಸುಮಾರಿಗೆ ವಿಕಾಸ್ ಅವರು ತಮ್ಮ ಪತ್ನಿ ಮತ್ತು ಮಗನೊಂದಿಗೆ ಸ್ವಿಫ್ಟ್ ಕಾರಿನಲ್ಲಿ ಸಾಂಗ್ಲಿಯಿಂದ ಪಯ್ಯನ್ನೂರಿಗೆ ಪ್ರಯಾಣಿಸುತ್ತಿದ್ದರು. ಅವರ ಕಾರು ರಾಷ್ಟ್ರೀಯ ಹೆದ್ದಾರಿ 66 ರ ಬೈಕಂಪಾಡಿ ಜಂಕ್ಷನ್ ನಲ್ಲಿರುವ ದ್ವಾರಾ ಹೋಟೆಲ್ ಬಳಿ ತಲುಪಿದಾಗ, ಇನೋವಾ ಕಾರಿನಲ್ಲಿ ಬಂದ ಏಳು ಮಂದಿ ಅಪರಿಚಿತ ದುಷ್ಕರ್ಮಿಗಳ ತಂಡ ಇವರ ಕಾರನ್ನು ಅಡ್ಡಗಟ್ಟಿದೆ. ವಿಕಾಸ್ ಅವರನ್ನು ಬಲವಂತವಾಗಿ ಕಾರಿನಿಂದ ಕೆಳಗೆ ತಳ್ಳಿದ ದರೋಡೆಕೋರರು, ಅವರ ಪತ್ನಿ ಮತ್ತು ಮಗನಿದ್ದ ಸ್ವಿಫ್ಟ್ ಕಾರನ್ನು ಅಪಹರಿಸಿ ಚಲಾಯಿಸಿಕೊಂಡು ಹೋಗಿದ್ದಾರೆ.
ದುಷ್ಕರ್ಮಿಗಳು ಕಾರನ್ನು ಪಣಂಬೂರು ಬೀಚ್ ರಸ್ತೆಯ ಕಡೆಗೆ ಚಲಾಯಿಸಿದ್ದು, ಅಲ್ಲಿ ವಿಕಾಸ್ ಅವರ ಪತ್ನಿಯ ಬಳಿ ಇದ್ದ ಬ್ಯಾಗ್‌ನಲ್ಲಿದ್ದ 180 ಗ್ರಾಂ ಚಿನ್ನದ ಆಭರಣಗಳನ್ನು ದೋಚಿದ್ದಾರೆ. ಆದರೆ, ಮಹಿಳೆ ಧರಿಸಿದ್ದ ಚಿನ್ನದ ಸರವನ್ನು ದರೋಡೆಕೋರರು ಮುಟ್ಟಿಲ್ಲ ಎನ್ನಲಾಗಿದೆ. ತದನಂತರ ತಾಯಿ ಮತ್ತು ಮಗನನ್ನು ರಸ್ತೆ ಬದಿಯಲ್ಲೇ ಬಿಟ್ಟು, ವಿಕಾಸ್ ಅವರ ಕಾರಿನಲ್ಲೇ ದರೋಡೆಕೋರರು ಪರಾರಿಯಾಗಿದ್ದಾರೆ.
ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಘಟನೆ ನಡೆದಿರುವ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಪ್ರಮುಖ ಸುಳಿವುಗಳು ಸಿಕ್ಕಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























