ಕೊಟ್ಟಿಗೆಹಾರ: ಭಾರಿ ಮರ ಉರುಳಿ ಮೂರು ವಿದ್ಯುತ್ ಕಂಬಗಳು ನೆಲಕ್ಕೆ– ಕೂದಲೆಳೆ ಅಂತರದಲ್ಲಿ ಪಾರಾದ ಸರ್ಕಾರಿ ಬಸ್!

mudigere
13/04/2026

ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗುಲ್ ಬಳಿ ಸೋಮವಾರ ಭೀಕರ ಅಪಘಾತವೊಂದು ತಪ್ಪಿದ್ದು, ಬೃಹತ್ ಮರವೊಂದು ವಿದ್ಯುತ್ ಕಂಬಗಳ ಮೇಲೆ ಉರುಳಿ ಬಿದ್ದಿದೆ. ಈ ಘಟನೆಯಿಂದಾಗಿ ಸುಮಾರು 60 ಪ್ರಯಾಣಿಕರಿದ್ದ ಸರ್ಕಾರಿ ಬಸ್ ಹಾಗೂ ಪ್ರಯಾಣಿಕರು ಪ್ರಾಣಾಪಾಯದಿಂದ ಅದೃಷ್ಟವಶಾತ್ ಪಾರಾಗಿದ್ದಾರೆ.

ಹೆದ್ದಾರಿಯ ಪಕ್ಕದಲ್ಲಿದ್ದ ಬೃಹತ್ ಮರವೊಂದು ಏಕಾಏಕಿ ಕುಸಿದು ಪಕ್ಕದಲ್ಲಿದ್ದ ವಿದ್ಯುತ್ ಕಂಬದ ಮೇಲೆ ಬಿದ್ದಿದೆ. ಮರದ ಭಾರಕ್ಕೆ ಸಿಲುಕಿ ಸರಣಿ ಎಂಬಂತೆ ಒಟ್ಟು ಮೂರು ವಿದ್ಯುತ್ ಕಂಬಗಳು ರಸ್ತೆಗೆ ಅಡ್ಡಲಾಗಿ ಪಲ್ಟಿಯಾಗಿವೆ.

ತಪ್ಪಿದ ಭಾರಿ ದುರಂತ:

ಮರ ಮತ್ತು ಕಂಬಗಳು ರಸ್ತೆಗೆ ಬೀಳುವ ಕೇವಲ 10 ಸೆಕೆಂಡ್ ಮೊದಲು ಸುಮಾರು 50 ರಿಂದ 60 ಪ್ರಯಾಣಿಕರನ್ನು ಹೊತ್ತಿದ್ದ ಸರ್ಕಾರಿ ಬಸ್ಸೊಂದು ಅದೇ ಜಾಗವನ್ನು ದಾಟಿ ಹೋಗಿತ್ತು. ಒಂದು ವೇಳೆ ಬಸ್ ಸಂಚರಿಸುವಾಗಲೇ ಈ ಘಟನೆ ಸಂಭವಿಸಿದ್ದರೆ ದೊಡ್ಡ ಮಟ್ಟದ ಪ್ರಾಣಹಾನಿಯಾಗುವ ಸಾಧ್ಯತೆಯಿತ್ತು. ಬಸ್ ಸ್ವಲ್ಪ ಮುಂದಕ್ಕೆ ಸಾಗಿದ್ದರಿಂದ ಸಂಭವನೀಯ ದುರಂತವೊಂದು ತಪ್ಪಿದಂತಾಗಿದೆ.

ವಿದ್ಯುತ್ ಕಂಬಗಳು ರಸ್ತೆಯಾದ್ಯಂತ ಬಿದ್ದ ಪರಿಣಾಮ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ರಸ್ತೆಯ ಎರಡು ಬದಿಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದು, ಸಾರ್ವಜನಿಕರು ಹಾಗೂ ಪ್ರಯಾಣಿಕರು ಪರದಾಡುವಂತಾಯಿತು.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ನಿವಾಸಿಗಳು ಹಾಗೂ ಮೆಸ್ಕಾಂ (MESCOM) ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದರು. ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ವಿದ್ಯುತ್ ತಂತಿಗಳು ಹಾಗೂ ಕಂಬಗಳನ್ನು ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version