5:55 PM Thursday 16 - October 2025

ಲಗ್ನ ಪತ್ರಿಕೆಯಲ್ಲಿ ಹೆಸರು ಹಾಕಿಲ್ಲ ಎಂದು ನಾಲ್ವರಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಸಂಬಂಧಿ!

telangana news
22/06/2021

ತೆಲಂಗಾಣ: ಲಗ್ನಪತ್ರಿಕೆಯಲ್ಲಿ ತನ್ನ ಹೆಸರು ಯಾಕೆ ಹಾಕಿಲ್ಲ ಎಂದು ಜಗಳವಾಡಿದ ವ್ಯಕ್ತಿಯೋರ್ವ ತನ್ನ ಸಂಬಂಧಿಕರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಹೈದರಾಬಾದ್ ನ ಸಿಕಂದ್ರಾಬಾದ್ ತುಕಾರಾಂಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಚಂದ್ರಶೇಖರ್ ನಗರದಲ್ಲಿ ನಡೆದಿದೆ.

ಚಂದ್ರನಗರ ನಿವಾಸಿ ಸುರೇಶ್ ಎಂಬ ಯುವಕನ ವಿವಾಹ ಮೂರು ದಿನಗಳ ಹಿಂದೆಯಷ್ಟೇ ನಡೆದಿತ್ತು. ಆದರೆ, ಮದುವೆ ಲಗ್ನ ಪತ್ರಿಕೆಯಲ್ಲಿ ಸರ್ವೇಶ್ ಎಂಬ ಸಂಬಂಧಿಕನೊಬ್ಬನ ಹೆಸರನ್ನು ಹಾಕಿರಲಿಲ್ಲ ಎಂದು ಹೇಳಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವೇಶ್ ಮದುವೆಯ ದಿನದಂದೇ ಗಲಾಟೆ ನಡೆಸಿದ್ದರು.

ಮದುವೆ ಸಂದರ್ಭದಲ್ಲಿ ಇಂತಹದ್ದೆಲ್ಲ ಬೇಡ, ಇದರ ಬಗ್ಗೆ ಇನ್ನೊಂದು ದಿನ ಮಾತನಾಡೋಣ ಎಂದು ಹೇಗೋ ಸರ್ವೇಶ್ ನ್ನು ಸಮಾಧಾನಪಡಿಸಿ ಕುಟುಂಬಸ್ಥರು ಕಳುಹಿಸಿದ್ದರೆನ್ನಲಾಗಿದೆ. ಮರುದಿನ ಸರ್ವೇಶ್ ಮನೆಗೆ ತೆರಳಿದ ಸಂಬಂಧಿಕರು ಸರ್ವೇಶ್ ನನ್ನು ಸಮಾಧಾನ ಪಡಿಸಲು ಯತ್ನಿಸಿದ್ದರು.

ತಮ್ಮ ಮನೆಗೆ ಬಂದು ಸಮಾಧಾನ ಪಡಿಸಲು ಮುಂದಾದರೂ ಸರ್ವೇಶ್ ತನ್ನ ಕುಟುಂಬಸ್ಥರ ಮೇಲೆಯೇ ತೀವ್ರವಾಗಿ ಕೋಪಗೊಂಡಿದ್ದಾನೆ. ಹೀಗಾಗಿ ಮಾತಿಗೆ ಮಾತು ಬೆಳೆದು ಜಗಳ ಹೊಡೆದಾಟಕ್ಕೆ ತಲುಪಿದ್ದು,  ಈ ವೇಳೆ ಆವೇಶದಿಂದ ಸರ್ವೇಶ್ ಹಾಗೂ ಶೇಖರ್ ಎಂಬವರು ಮದುಮಗನ ಕುಟುಂಬಸ್ಥರ ಮೇಲೆ ಕತ್ತಿಗಳಿಂದ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಕತ್ತಿಯ ಏಟಿನಿಂದ ಗಾಯಗೊಂಡ ಕುಟುಂಬಸ್ಥರು ನೇರವಾಗಿ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಗಾಯಾಳುಗಳನ್ನು ಒಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

Exit mobile version