ಕಾಲೇಜು ಕ್ಯಾಂಪಸ್ ನಲ್ಲಿ ವಿದ್ಯುತ್ ಆಘಾತ: ಸಂಶೋಧನಾ ವಿದ್ಯಾರ್ಥಿನಿ ದುರಂತ ಸಾವು, ಆಕ್ರೋಶ
ಚಂಡೀಗಢ: ಪಂಜಾಬ್ ವಿಶ್ವವಿದ್ಯಾಲಯದ (PU) ಕ್ಯಾಂಪಸ್ನಲ್ಲಿ ಮಂಗಳವಾರ ನಡೆದ ದೌರ್ಭಾಗ್ಯಕರ ಘಟನೆಯಲ್ಲಿ ಮೈಕ್ರೋಬಯಾಲಜಿ ವಿಭಾಗದ ಪಿಎಚ್ಡಿ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ವಿದ್ಯುತ್ ಆಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಹರ್ಯಾಣದ ಮಹೇಂದರ್ಗಢ ಜಿಲ್ಲೆಯ ನಿವಾಸಿಯಾದ ಜ್ಯೋತಿ (28) ಮೃತಪಟ್ಟ ವಿದ್ಯಾರ್ಥಿನಿ. ಇವರು ನಾಲ್ಕನೇ ವರ್ಷದ ಪಿಎಚ್ಡಿ ವ್ಯಾಸಂಗ ಮಾಡುತ್ತಿದ್ದರು.
ಮಂಗಳವಾರ ಗರ್ಲ್ಸ್ ಹಾಸ್ಟೆಲ್ ಸಂಖ್ಯೆ 10 ರ ಬಳಿ ಇರುವ ರಸ್ತೆ ಮತ್ತು ಪಾರ್ಕಿಂಗ್ ಪ್ರದೇಶದ ನಡುವಿನ ಕಾಲುದಾರಿಯಲ್ಲಿ ಜ್ಯೋತಿ ತಮ್ಮ ಹಾಸ್ಟೆಲ್ ನಿಂದ ವಿಭಾಗಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಆ ಪ್ರದೇಶದಲ್ಲಿ ನೀರು ನಿಂತಿತ್ತು. ವಿಶ್ವವಿದ್ಯಾಲಯದ ಪ್ರಾಥಮಿಕ ಮಾಹಿತಿಯಂತೆ, ಜ್ಯೋತಿ ಜಾರಿ ಬಿದ್ದು ಪಕ್ಕದಲ್ಲಿದ್ದ ವಿದ್ಯುತ್ ಕಂಬ/ಸಂಪರ್ಕ ಪೆಟ್ಟಿಗೆಯ ಸ್ಪರ್ಶಕ್ಕೆ ಬಂದಿದ್ದಾರೆನ್ನಲಾಗಿದೆ.
ಆದರೆ, ಸ್ಥಳದಲ್ಲಿದ್ದ ನೀರಿಗೆ ಹಾನಿಗೊಳಗಾದ ವಿದ್ಯುತ್ ತಂತಿಗಳಿಂದ ವಿದ್ಯುತ್ ಪ್ರವಹಿಸಿತ್ತು ಮತ್ತು ಬೆಳಗಿನ ಸಮಯದಲ್ಲೇ ಇನ್ನೊಬ್ಬ ವಿದ್ಯಾರ್ಥಿಗೂ ಅದೇ ಜಾಗದಲ್ಲಿ ಸಣ್ಣ ಪ್ರಮಾಣದ ಶಾಕ್ ಹೊಡೆದಿತ್ತು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಘಟನೆ ತಕ್ಷಣ ಜ್ಯೋತಿ ಅವರನ್ನು ಸ್ಥಳೀಯ ಜಿಎಂಎಸ್ ಹೆಚ್–16 (GMSH-16) ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಮೃತ ಜ್ಯೋತಿ ಅವರ ತಂದೆ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಕುಟುಂಬಕ್ಕೆ ಆಧಾರವಾಗಿದ್ದ ಮಗಳಿಗೆ ಶೀಘ್ರದಲ್ಲೇ ಮದುವೆ ನಿಶ್ಚಯವಾಗಿತ್ತು ಎಂದು ತಿಳಿದುಬಂದಿದೆ.
ಈ ಘಟನೆಯಿಂದ ರೊಚ್ಚಿಗೆದ್ದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಉಪಕುಲಪತಿಗಳ (VC) ಕಚೇರಿಯ ಹೊರಗೆ ಬೃಹತ್ ಪ್ರತಿಭಟನೆ ನಡೆಸಿದರು. ಬ್ಯಾಕೇಡ್ಗಳನ್ನು ಮುರಿದು, ಗೇಟ್ ಗಳಿಗೆ ಬೀಗ ಹಾಕಿ ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕ್ಯಾಂಪಸ್ ನಲ್ಲಿ ವಿದ್ಯುತ್ ತಂತಿಗಳ ಸುರಕ್ಷತೆಯ ಕೊರತೆಯೇ ಈ ಸಾವಿಗೆ ಕಾರಣ ಎಂದು ಆರೋಪಿಸಿರುವ ವಿದ್ಯಾರ್ಥಿಗಳು ಮತ್ತು ಮೃತರ ಕುಟುಂಬಸ್ಥರು, ಘಟನೆಯ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಎಫ್ ಐಆರ್ (FIR) ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























