ಮದ್ಯದಂಗಡಿ ತೆರೆದದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಮದ್ಯಪ್ರಿಯರು!
ಕೊಯಮತ್ತೂರು: ಕೊರೊನಾ ಹಿನ್ನೆಲೆಯಲ್ಲಿ ಜಾರಿಗೊಳಿಸಿದ ಲಾಕ್ ಡೌನ್ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಎರಡು ತಿಂಗಳ ಕಾಲ ಮದ್ಯದಂಗಡಿ ಮುಚ್ಚಿದ್ದು, ಇದೀಗ ಲಾಕ್ ಡೌನ್ ಸಡಿಲಿಕೆಯ ಭಾಗವಾಗಿ ಮದ್ಯದಂಗಡಿ ತೆರೆಯಲಾಗಿದೆ.
ಮದ್ಯದಂಗಡಿ ತೆರೆದ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಪಟಾಕಿ ಸಿಡಿಸಿ ಸಂಭ್ರಮಿಸಿ ಮದ್ಯದಂಗಡಿ ಎದುರು ಸಾಲುಗಟ್ಟಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಕೊರೊನಾ ಪ್ರಕರಣಗಳು ಸಂಖ್ಯೆ ಕಡಿಮೆಯಾದ ತಮಿಳುನಾಡಿನ 27 ಜಿಲ್ಲೆಗಳಲ್ಲಿ ಜೂನ್ ಮಧ್ಯೆಯೇ ಲಾಕ್ ಡೌನ್ ರ್ಬಂಧಗಳನ್ನು ಸಡಿಲಿಸಿ, ಮದ್ಯದಂಗಡಿಗಳನ್ನು ಸೀಮಿತ ಅವಧಿಗೆ ತೆರೆಯಲು ಅವಕಾಶ ನೀಡಲಾಗಿತ್ತು. ಆದರೆ, ಕರೊನಾ ಪ್ರಕರಣ ಹೆಚ್ಚಿದ್ದ ಕಾರಣಕ್ಕೆ ಕೊಯಮತ್ತೂರು ಸೇರಿದಂತೆ 11 ಜಿಲ್ಲೆಗಳಲ್ಲಿ ಪೂರ್ಣ ನಿರ್ಬಂಧಗಳನ್ನು ಹಾಕಲಾಗಿತ್ತು.
ತಮಿಳುನಾಡಿನಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾದ ಹಿನ್ನೆಲೆಯಲ್ಲಿ 11 ಜಿಲ್ಲೆಗಳಲ್ಲಿ ಕೂಡ ಇಂದಿನಿಂದ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗುತ್ತಿದ್ದು, ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಮದ್ಯ ಪ್ರೇಮಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದ್ದಾರೆ ಎಂದು ವರದಿಯಾಗಿದೆ.

























